ಅಯೋಧ್ಯೆಯನ್ನು ಪ್ರತಿನಿಧಿಸುವ ಫೈಜಾಬಾದ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಗಾಯಕ ಸೋನುನಿಗಮ್ ಅಯೋಧ್ಯೆ ಜನರನ್ನು ಟೀಕಿಸಿದ್ದಾರೆಂದ ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳನ್ನು ಸೋನು ನಿಗಮ್ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಮಮಂದಿರ ನಿರ್ಮಾಣವಾಗಿರುವ ಅಯೋಧ್ಯೆ ಕ್ಷೇತ್ರವನ್ನು ಪ್ರತಿನಿಧಿಸುವ ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ ಗೆದ್ದಿದ್ದು ಬಿಜೆಪಿ ಸೋತಿದೆ. ಈ ಬಗ್ಗೆ ಸೋನು ನಿಗಮ್ ಸಿಂಗ್ ಎಂಬ ಟ್ವಿಟರ್ ಖಾತೆಯಲ್ಲಿ “ಇಡೀ ಅಯೋಧ್ಯೆಯನ್ನು ಸುಂದರಗೊಳಿಸಿದ ಸರ್ಕಾರ, ಹೊಸ ವಿಮಾನ ನಿಲ್ದಾಣ, ರೈಲು ನಿಲ್ದಾಣವನ್ನು ನೀಡಿದೆ, 500 ವರ್ಷಗಳ ನಂತರ ರಾಮಮಂದಿರವನ್ನು ನಿರ್ಮಿಸಿದೆ, ಇಡೀ ದೇವಾಲಯದ ಆರ್ಥಿಕತೆಯನ್ನು ಸೃಷ್ಟಿಸಿದೆ, ಆದರೆ ಆ ಪಕ್ಷವು ಅಯೋಧ್ಯೆ ಸ್ಥಾನಕ್ಕಾಗಿ ಹೋರಾಟ ಮಾಡಬೇಕಾಗಿದೆ. ಅಯೋಧ್ಯೆಯ ಜನರಿಗೆ ನಾಚಿಕೆಯಾಗಬೇಕು!” ಎಂದು ಪೋಸ್ಟ್ ಮಾಡಲಾಗಿದೆ.
ಇದನ್ನು ಗಾಯಕ ಸೋನು ನಿಗಮ್ ಅವರ ಪೋಸ್ಟ್ ಎಂದು ಬಿಂಬಿಸಿದ್ದ ಕೆಲ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳು ಸೋನು ನಿಗಮ್ ಅಯೋಧ್ಯೆ ಜನರನ್ನು ಟೀಕಿಸಿದ್ದಾರೆಂದು ಹೇಳಿದ್ದವು. ಇದಕ್ಕೆ ಉತ್ತರಿಸಿರುವ ಸೋನು ನಿಗಮ್ ಸತ್ಯಾಂಶವನ್ನು ಪರಿಶೀಲಿಸದೇ ಕೆಲ ಮಾಧ್ಯಮಗಳು ಇದು ನನ್ನ ಪೋಸ್ಟ್ ಎಂಬಂತೆ ವರದಿ ಮಾಡುತ್ತಿವೆ. ಈ ಕಾರಣಕ್ಕಾಗೇ ನಾನು 7 ವರ್ಷದ ಹಿಂದೆ ಟ್ವಿಟರ್ ತೊರೆಯಲು ಕಾರಣವಾಯ್ತು ಎಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.
ಕೆಲ ಸುದ್ದಿ ವಾಹಿನಿಗಳು ಸೇರಿದಂತೆ ಜನರು ಟ್ವಿಟರ್ ಖಾತೆಯ ವಿವರಣೆಯನ್ನೂ ಓದದೇ ತಮ್ಮ ಮೂಲಭೂತ ವಿವೇಕವನ್ನು ಕಳೆದುಕೊಂಡಿರುವ ಬಗ್ಗೆ ನಾನು ಆಶ್ಚರ್ಯ ಪಡುತ್ತೇನೆ. ಅದು ಸೋನು ನಿಗಮ್ ಸಿಂಗ್ ಎಂಬುವವರ ಟ್ವಿಟರ್ ಖಾತೆ. ವಿವರಣೆಯಲ್ಲಿ ಅವರು ಬಿಹಾರದ ಕ್ರಿಮಿನಲ್ ವಕೀಲ ಎಂಬುದು ಗೊತ್ತಾಗಿದೆ. ಆದರೆ ಇದ್ಯಾವುದನ್ನೂ ಪರಿಶೀಲಿಸದೇ ತಪ್ಪಾಗಿ ವರದಿ ಮಾಡಲಾಗುತ್ತಿದೆ.
ಏಳು ವರ್ಷಗಳ ಹಿಂದೆ ನಾನು ಟ್ವಿಟರ್‌ನಿಂದ ಹೊರಬರಲು ನನ್ನನ್ನು ಒತ್ತಾಯಿಸಿದ ರೀತಿಯ ಅಸಹ್ಯ ಇದು. ನಾನು ಸಂವೇದನಾಶೀಲ ರಾಜಕೀಯ ಟೀಕೆಗಳನ್ನು ಮಾಡುವುದನ್ನು ನಂಬುವುದಿಲ್ಲ ಮತ್ತು ನಾನು ನನ್ನ ಕೆಲಸದ ಮೇಲೆ ಮಾತ್ರ ಗಮನಹರಿಸುತ್ತೇನೆ. ಆದರೆ ಈ ಘಟನೆಯು ನನಗೆ ಮಾತ್ರವಲ್ಲ, ನನ್ನ ಕುಟುಂಬದ ಸುರಕ್ಷತೆಗೂ ಆತಂಕಕಾರಿಯಾಗಿದೆ ಎಂದಿದ್ದಾರೆ.
ಅಂತಹ ಗೊಂದಲಗಳನ್ನು ತಪ್ಪಿಸಲು ಆನ್‌ಲೈನ್‌ನಲ್ಲಿ ತನ್ನ ಹೆಸರನ್ನು ಬದಲಾಯಿಸಲು ನಮ್ಮ ತಂಡವು ಸೋನು ಸಿಗಮ್ ಸಿಂಗ್ ಅವರನ್ನು ಸಂಪರ್ಕಿಸಿದೆ ಎಂದು ತಿಳಿಸಿದ್ದಾರೆ.