ದಾವಣಗೆರೆ: 2,000 ರೂ. ಲಂಚ ಪಡೆಯುತ್ತಿದ್ದ ಉಪ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ಲೋಕಾಯುಕ್ತ ಬಲೆಗೆ ಬಿದ್ದವರು.
ಹಿರೇಗಂಗೂರು ಗ್ರಾಮದ ಎಸ್.ಆರ್. ಕುಮಾರ್ ಎಂಬವರು ಸಹೋದರ ಗಿರೀಶ್ ಅವರೊಂದಿಗೆ ಬೋನಾಪೈಡ್ ಪ್ರಮಾಣ ಪತ್ರಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಗುರುತಿನ ಚೀಟಿ ನೀಡಿಲ್ಲವೆನ್ನುವ ಹಿಂಬರದೊಂದಿಗೆ ಅರ್ಜಿ ತಿರಸ್ಕರಿಸಲಾಗಿದೆ. ಅ. 10 ರಂದು ಮತ್ತೊಮ್ಮೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದು, ಬೋನಾಪೈಡ್ ಪ್ರಮಾಣ ಪತ್ರದ ಮಾಡಿಕೊಡದ ಬಗ್ಗೆ ವಿಚಾರಿಸಿದಾಗ 2000 ರೂ. ನೀಡಿದಲ್ಲಿ ಪ್ರಮಾಣ ಪತ್ರ ಮಾಡಿಕೊಡುವುದಾಗಿ ತಹಶೀಲ್ದಾರ್ ಹೇಳಿದ್ದಾರೆ.
ಕುಮಾರ್ ಮುಂಗಡವಾಗಿ 500 ರೂಪಾಯಿ ನೀಡಿದ್ದು, ಲೋಕಾಯುಕ್ತರಿಗೆ ದೂರು ನೀಡಿದ್ದು, ಮಂಗಳವಾರ ಉಳಿದ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಲ್. ಕೌಲಾಪುರೆ, ಡಿವೈಎಸ್ಪಿ ಕಲಾವತಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ನಿರೀಕ್ಷಕ ಸಿ. ಮಧುಸೂಧನ್, ಪ್ರಭು ಬಿ. ಸೂರಿನ, ಪಿ. ಸರಳಾ, ಸಿಬ್ಬಂದಿಗಳಾದ ಆಂಜನೇಯ, ವೀರೇಶ್, ಸುಂದರೇಶ್, ಆಶಾ, ಮಲ್ಲಿಕಾರ್ಜುನ, ಲಿಂಗೇಶ್, ಗಿರೀಶ್, ಕೃಷ್ಣ ವಿನಾಯಕ್, ಬಸವರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.