ಬೆಂಗಳೂರು: ಕಾಲುವೆ ನೀರು ಅಕ್ರಮ ಬಳಕೆ ತಡೆಯುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ರಚಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕರ್ನಾಟಕ ನೀರಾವರಿ ತಿದ್ದುಪಡಿ ಕಾಯ್ದೆ ಕುರಿತಾಗಿ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳಿಗೆ ವಿಕಾಸಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತದಂತೆ ರೈತರಲ್ಲಿ ಅರಿವು ಮೂಡಿಸಲಾಗುವುದು. ಜತೆಗೆ ಇದರ ನಿಯಂತ್ರಣಕ್ಕೆ ನೀರಾವರಿ ಮತ್ತು ಇಂಧನ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಹೇಳಿದ್ದಾರೆ.
ಕಾಲುವೆ ಕೊನೆ ಭಾಗದವರೆಗೂ ನೀರು ತಲುಪಬೇಕು. ನೀರಾವರಿ ಯೋಜನೆಗಳಡಿ ಸಮರ್ಪಕ ನೀರು ನಿರ್ವಹಣೆ ಕುರಿತಾಗಿ ಕಾಯ್ದೆಯನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು. ಕೆರೆ ತುಂಬಿಸುವ ಯೋಜನೆಗಳಿಗೆ ಸಾಕಷ್ಟು ಹಣ ವೆಚ್ಚವಾಗಿದೆ. ಕುಡಿಯುವ ನೀರಿಗೆ ತುಂಬಿಸುವ ಕೆರೆ ನೀರನ್ನು ನೀರಾವರಿ ಯೋಜನೆಗೆ ಬಳಸಿದರೆ ಯೋಜನೆಯ ಪ್ರಯೋಜನವೇನು ಎಂದು ಹೇಳಿದ್ದಾರೆ.
ರೈತರಿಗೆ ನೀಡುವ ಉಚಿತ ವಿದ್ಯುತ್ ಗೆ 13,000 ಕೋಟಿ ರೂಪಾಯಿ ವೆಚ್ಚವಾಗುತ್ತಿದ್ದು, ಅದನ್ನು ಸರಿಯಾಗಿ ಬಳಕೆ ಮಾಡಬೇಕು. ನೀರಾವರಿ ಉದ್ದೇಶಕ್ಕೆ ಸಂಪರ್ಕ ಪಡೆದು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.