
ಬೆಂಗಳೂರು: ಫೆಬ್ರವರಿ 24 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಹಾಗೂ ಐಕ್ಯತಾ ಸಮಾವೇಶಕ್ಕೆ ವಿದ್ಯಾರ್ಥಿಗಳನ್ನು ಕಳಿಸಿಕೊಡುವಂತೆ ಪದವಿ ಕಾಲೇಜುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ಅರಮನೆ ಮೈದಾನದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳನ್ನು ಕಳಿಸಿಕೊಡಲು ತಿಳಿಸಲಾಗಿದೆ.
ಕಾಲೇಜುಗಳಲ್ಲಿ ಸಂವಿಧಾನ ಜಾಗೃತಿ ಜಾಥಾ, ಸಮಾವೇಶ ಆಯೋಜಿಸಬೇಕಿದೆ. ಸಾರ್ವಜನಿಕ ಆಡಳಿತ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಸಂವಿಧಾನ ಕುರಿತ ಸಂವಾದ ಏರ್ಪಡಿಸಿ ಸಕ್ರಿಯವಾಗಿ ಭಾಗವಹಿಸಲು ಕ್ರಮ ವಹಿಸಬೇಕಿದೆ.
ಸರ್ಕಾರಿ, ಖಾಸಗಿ ಕಾಲೇಜುಗಳ ಪ್ರಾಂಶುಪಾಲರು ಪರಿಣಿತ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳನ್ನು ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಂವಿಧಾನ ಸಂವಾದ ಕಾರ್ಯಕ್ರಮಕ್ಕೆ ಕಳುಹಿಸಿಕೊಡಬೇಕು. ಫೆಬ್ರವರಿ 20ರೊಳಗೆ ವಿದ್ಯಾರ್ಥಿಗಳ ಪಟ್ಟಿಯನ್ನು ಕಳುಹಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.