![](https://kannadadunia.com/wp-content/uploads/2023/06/ba283fdb-bcb1-4130-ada2-11796269900a.jpg)
ಮಧ್ಯಪ್ರದೇಶದಲ್ಲಿ ದಲಿತರ ಮನೆ ಧ್ವಂಸ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದಲಿತ ಸಮುದಾಯದ ಮೇಲಿನ ದೌರ್ಜನ್ಯಗಳು ಗರಿಷ್ಠ ಮಟ್ಟ ತಲುಪಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೂಲಿ ಕೆಲಸಕ್ಕೆ ಹೋಗಿದ್ದ ಕುಟುಂಬಗಳಿಗೆ ಮಾಹಿತಿ ನೀಡದೆ ಮನೆ ಕೆಡವಲಾಗಿದೆ. ಪ್ರಧಾನಿ ಆವಾಸ್ ಯೋಜನೆಯಡಿ ನಿರ್ಮಿಸಿದ್ದ ಮನೆಗಳನ್ನೂ ನೆಲಸಮಗೊಳಿಸಲಾಗಿದೆ. ದಲಿತರು, ಆದಿವಾಸಿಗಳು ಮತ್ತು ಬಡವರ ಮೇಲೆ ದೌರ್ಜನ್ಯ ಎಸಗಿದ ಬಿಜೆಪಿ ಸರಕಾರಕ್ಕೆ ಮಧ್ಯಪ್ರದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ಗುರುವಾರ ಮಧ್ಯಪ್ರದೇಶದ ಆಡಳಿತವು ಸಾಗರ್ ಜಿಲ್ಲೆಯಲ್ಲಿ 10 ಮನೆಗಳನ್ನು ನೆಲಸಮಗೊಳಿಸಿದೆ. ಈ ಪೈಕಿ ಏಳು ಮನೆಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಯೋಜನೆಯಡಿ ನಿರ್ಮಿಸಲಾಗಿದೆ. ಅರಣ್ಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂದು ರಾಜ್ಯ ಆಡಳಿತ ಹೇಳಿಕೊಂಡಿದೆ.
ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್ ಶುಕ್ರವಾರ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಬಿಎಸ್‌ಪಿ ವರಿಷ್ಠೆ ಮಾಯಾವತಿ ಕೂಡ ದಲಿತರ ಮೇಲಿನ ಕ್ರಮವನ್ನು ಖಂಡಿಸಿದ್ದಾರೆ.
ಮಧ್ಯಪ್ರದೇಶದ ಬುಲ್ಡೋಜರ್ ರಾಜಕಾರಣವು ಈಗ ಮನೆ ಮತ್ತು ಶಾಲೆಗಳನ್ನು ಗುರಿಯಾಗಿಸಲು ಪ್ರಾರಂಭಿಸಿದೆ. ಈಗ ಅವರು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಬಡವರ ಮನೆಗಳನ್ನು ಕೆಡವಲು ಪ್ರಾರಂಭಿಸಿದ್ದಾರೆ, ಇದು ಅತ್ಯಂತ ಖಂಡನೀಯವಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.