ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಅಧಿಕಾರಿಯಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಘಟನೆ ನಡೆದಿದ್ದು, ಆರೋಪಿ ಹಾಗೂ ಆತನ ಪತ್ನಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ, ತನ್ನ ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದು, ಅಧಿಕಾರಿ ವಿರುದ್ಧ ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದಾರೆ. ಪ್ರಕರಣದ ಬೆನ್ನಲ್ಲೇ ಸಿಎಂ ಅರವಿಂದ್ ಕೇಜ್ರಿವಾಲ್, ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಈ ನಡುವೆ ಆರೋಪಿ ಸರ್ಕಾರಿ ಅಧಿಕಾರಿಯನ್ನು ಹಾಗೂ ಆತನ ಪತ್ನಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತ್ರಸ್ತ ಬಾಲಕಿಯ ತಂದೆ 2020ರಲ್ಲಿ ವಿಧಿವಶರಾಗಿದ್ದರು. ತಂದೆಯ ಸ್ನೇಹಿತನಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕನಾಗಿದ್ದ ಆರೋಪಿ ಅಧಿಕಾರಿ, ದೆಹಲಿ ಚರ್ಚ್ ನಲ್ಲಿ ಬಾಲಕಿಯನ್ನು ಭೇಟಿಯಾಗಿದ್ದ. ತಂದೆಯನ್ನು ಕಳೆದುಕೊಂಡಿದ್ದ ಬಾಲಕಿ ತೀವ್ರವಾಗಿ ಮನನೊಂದಿದ್ದಳು. ಆಕೆಯ ಭಾವನಾತ್ಮಕತೆಯನ್ನೇ ದುರುಪಯೋಗಪಡಿಸಿಕೊಂಡ ಅಧಿಕಾರಿ ಆಗಾಗ ಆಕೆಯನ್ನು ಭೇಟಿಯಾಗುತ್ತಿದ್ದ. ಅಲ್ಲದೇ ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ. ಈಗ ಸಂತ್ರಸ್ತೆ ಗರ್ಭಿಣಿಯಾಗುತ್ತಿದ್ದಂತೆ ಅಧಿಕಾರಿಯ ಪತ್ನಿ ಗರ್ಭಪಾತವನ್ನು ಮಾಡಿಸಿದ್ದಲ್ಲದೇ, ಪತಿಯ ಕೃತ್ಯಕ್ಕೆ ಸಹಕರಿಸಿದ್ದಳು ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಸರ್ಕಾರಿ ಅಧಿಕಾರಿ ಹಾಗೂ ಕೃತ್ಯಕ್ಕೆ ಸಾಥ್ ನೀಡಿದ್ದ ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.