ದೆಹಲಿಯ ಜಂಗ್‌ಪುರದಲ್ಲಿ ನಡೆದ ವೈದ್ಯ ಹತ್ಯೆ ಪ್ರಕರಣದಲ್ಲಿ ಮನೆಗೆಲಸದಾಕೆಯೇ ಪ್ರಮುಖ ಆರೋಪಿ ಎಂಬುದನ್ನು ದೆಹಲಿ ಪೊಲೀಸರು ಕಂಡುಹಿಡಿದು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ 24 ವರ್ಷಗಳಿಂದ ವೈದ್ಯನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಯ ಸಹಾಯಕಿ ಬಸಂತಿ ಮತ್ತು ಆಕೆಯ ಸಹಾಯಕರಾದ ಆಕಾಶ್ ಜೋಶಿ ಮತ್ತು ಹಿಮಾಂಶು ಅವರನ್ನು ಬಂಧಿಸಲಾಗಿದೆ.
63 ವರ್ಷದ ವೈದ್ಯ ಯೋಗೀಶ್ ಚಂದ್ರಪಾಲ್ ಅವರು ಮೇ 10 ರಂದು ಜಂಗ್‌ಪುರ ಬಡಾವಣೆಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಕೊಲೆಗೆ ಸಂಬಂಧಿಸಿದಂತೆ ಅರವತ್ತರ ಆಸುಪಾಸಿನಲ್ಲಿರುವ ಪ್ರಮುಖ ಆರೋಪಿ ಬಸಂತಿ ತನ್ನ ಸಹಚರರಿಗೆ ವಿಡಿಯೋ ಕರೆಗಳ ಮೂಲಕ ಮನೆಯ ಒಳಭಾಗವನ್ನು ಮೊದಲೇ ತೋರಿಸಿ ಅದರಂತೆ ಅಪರಾಧವನ್ನು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಗಳು ವೈದ್ಯರಿಗೆ ಥಳಿಸಿ, ಬಾಯಿ ಮುಚ್ಚಿ ಕುರ್ಚಿಗೆ ಕಟ್ಟಿಹಾಕಿದರು. ಕುರ್ಚಿಯನ್ನು ಅಡುಗೆ ಕೋಣೆಗೆ ಎಳೆದುಕೊಂಡು ಹೋಗಿ ಅಲ್ಲಿ ಅವರು ಮೊಂಡಾದ ವಸ್ತುವಿನಿಂದ ತಲೆಗೆ ಹೊಡೆದು ಕತ್ತು ಹಿಸುಕಿದರು” ಎಂದು ತನಿಖಾಧಿಕಾರಿಗಳು ಹೇಳಿದರು.
ಆರೋಪಿಗಳು ವೈದ್ಯರ ಎರಡು ನಾಯಿಗಳನ್ನು ಸ್ನಾನಗೃಹದಲ್ಲಿ ಬೀಗ ಹಾಕಿ ಬಂಧಿಸಿದ್ದರು. ನಂತರ ಅವರು ಓಡಿಹೋಗುವ ಮೊದಲು ಮನೆ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸಂತಿ ಮತ್ತು ಆಕೆಯ ಇಬ್ಬರು ಸಹಾಯಕರನ್ನು ಬಂಧಿಸಲಾಗಿದ್ದು, ವೈದ್ಯರ ಹತ್ಯೆಗೆ ಸಂಬಂಧಿಸಿದಂತೆ ಐವರಿಗಾಗಿ ಹುಡುಕಾಟ ನಡೆಯುತ್ತಿದೆ. ಬಸಂತಿಯ ಸ್ನೇಹಿತ ವರ್ಷಾ, ಭೀಮ್, ವಿಶ್ವರೂಪ್ ಸಾಯಿ ಮತ್ತು ಇಬ್ಬರು ನೇಪಾಳ ಪ್ರಜೆಗಳು ಪರಾರಿಯಾಗಿದ್ದಾರೆ.
ಘಟನೆಯನ್ನು ವಿವರಿಸಿದ ಡಿಸಿಪಿ “ವೈದ್ಯರ ಪತ್ನಿ ಮೊದಲು ಅಡುಗೆಮನೆಯಲ್ಲಿ ಶವ ನೋಡಿದ ನಂತರ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಸ್ಥಳಕ್ಕೆ ಬಂದ ನಂತರ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಆರು ಮಂದಿ ಅವರ ಮನೆಯಿಂದ ಹೊರಗೆ ಹೋಗಿರೋದು ತಿಳಿದುಬಂದಿತ್ತು. ಘಟನೆಯ ನಂತರ, ಬಸಂತಿ ನಾಪತ್ತೆಯಾಗಿದ್ದರು. ನಮ್ಮ ತಂಡವು ಅವಳನ್ನು ಮೊದಲು ಬಂಧಿಸಿತು, ವಿಚಾರಣೆ ವೇಳೆ ಆಕೆ ತಪ್ಪೊಪ್ಪಿಕೊಂಡು ಕೊಲೆ ಪ್ರಕರಣವನ್ನು ಬಹಿರಂಗಪಡಿಸಿದ್ದಾಳೆ” ಎಂದು ಹೇಳಿದರು.