
ದೆಹಲಿಯ ಕರೋಲ್ ಬಾಗ್ ಪ್ರದೇಶದ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಶನಿವಾರದಂದು ಈ ಘಟನೆ ನಡೆದಿದ್ದು, 18 ವರ್ಷದ ಯುವಕ ದುರಂತ ಸಾವಿಗೀಡಾಗಿದ್ದಾನೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡ ನೋಡುತ್ತಿದ್ದಂತೆ ಕಣ್ಣ ಮುಂದೆಯೇ ನಡೆದ ಈ ಘೋರ ಘಟನೆಗೆ ಅಪಾರ್ಟ್ಮೆಂಟ್ ವಾಸಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ವಿಡಿಯೋ ವೀಕ್ಷಿಸಿದವರೂ ಸಹ ಯುವಕನ ಸಾವಿಗೆ ಮಮ್ಮಲಮರುಗಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೋವನ್ನು ANI ಸುದ್ದಿ ಸಂಸ್ಥೆ ಹಂಚಿಕೊಂಡಿದ್ದು, ಇದರಲ್ಲಿ ಕಂಡುಬರುವಂತೆ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಓರ್ವ ಯುವಕ ಕುಳಿತಿದ್ದರೆ ಅವನ ಮುಂದೆ ನಿಂತಿದ್ದ ಮತ್ತೊಬ್ಬ ಸ್ನೇಹಿತನ ಜೊತೆ ಸಂಭಾಷಣೆ ಮಾಡುತ್ತಿರುತ್ತಾನೆ. ಆಗ ಇದ್ದಕ್ಕಿದ್ದಂತೆ ಮೂರನೇ ಅಂತಸ್ತಿನಿಂದ ಬೀಳುವ ಏರ್ ಕಂಡೀಷನರ್ ನೇರವಾಗಿ ಸ್ಕೂಟರ್ ಮೇಲೆ ಕುಳಿತಿದ್ದ ಯುವಕನ ತಲೆಗೆ ಅಪ್ಪಳಿಸಿದೆ. ಪಕ್ಕದಲ್ಲಿ ನಿಂತಿದ್ದ ಯುವಕ ಸಹ ಕೆಳಗೆ ಬಿದ್ದಿದ್ದು, ಆದರೆ ಸ್ಕೂಟರ್ ಮೇಲೆ ಕುಳಿತಿದ್ದ ಯುವಕನ ತಲೆಯ ಮೇಲೆ ನೇರವಾಗಿ ಎಸಿ ಬಿದ್ದ ಕಾರಣ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಆತನ ಸ್ನೇಹಿತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.