
ಡೆಹ್ರಾಡೂನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸವಿನ್ ಬನ್ಸಾಲ್ ಐಎಎಸ್ ಅವರು ಗ್ರಾಹಕರ ಸೋಗಿನಲ್ಲಿ ಓಲ್ಡ್ ಮಸ್ಸೂರಿ ರಸ್ತೆಯಲ್ಲಿರುವ ಮದ್ಯದ ಅಂಗಡಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಬಾಟಲಿಗಳಿಗೆ ತಲಾ 20 ರೂ.ನಂತೆ ಅಂಗಡಿ ಸಿಬ್ಬಂದಿ ಹೆಚ್ಚಿನ ಬೆಲೆ ಕೇಳುತ್ತಿರುವ ಬಗ್ಗೆ ತಿಳಿದು ದಂಡ ವಿಧಿಸಿದ್ದಾರೆ.
ಅವರು ಅಂಗಡಿ ಬಳಿ ಬಂದು ಗ್ರಾಹಕರ ವೇಷ ಧರಿಸಿ ಮದ್ಯದ ಬಾಟಲಿ ಕೇಳಿದಾಗ 660 ರೂ. ದರವಿದ್ದರೂ 680 ರೂ. ಪಡೆಯುತ್ತಿರುವ ಬಗ್ಗೆ ತಿಳಿದುಕೊಂಡಿದ್ದಾರೆ.
ಅಂಗಡಿಯಿಂದ ಹೆಚ್ಚುವರಿ ಶುಲ್ಕ ವಿಧಿಸಿರುವುದನ್ನು ಗಮನಿಸಿದ ಡಿಎಂ ಅಂಗಡಿಯ ವಿರುದ್ಧ 50,000 ರೂ. ಚಲನ್ ಜಾರಿಗೊಳಿಸಿದ್ದಾರೆ. ಬನ್ಸಾಲ್ ಆರಂಭದಲ್ಲಿ ಗ್ರಾಹಕರಂತೆ ಬಂದು ಬೆಲೆ ಕೇಳಿ ಪ್ರಶ್ನಿಸುತ್ತಾರೆ. ಬಳಿಕ ತಮ್ಮ ಗುರುತನ್ನು ಬಹಿರಂಗಪಡಿಸುತ್ತಾರೆ. ದಾಸ್ತಾನು ಗಮನಿಸಿ ಪುಸ್ತಕ ಪರಿಶೀಲಿಸಿದ್ದಾರೆ. ಅಧಿಕಾರಿಯೊಬ್ಬರು ಮದ್ಯಕ್ಕಾಗಿ ಸರತಿ ಸಾಲಿನಲ್ಲಿ ನಿಂತು, ಹೆಚ್ಚುವರಿ ದರಕ್ಕೆ ಬಾಟಲಿಗಳನ್ನು ಮಾರಾಟ ಮಾಡುವ ಅವ್ಯವಹಾರವನ್ನು ಬಯಲಿಗೆಳೆಯುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.