ಬೆಳಗಾವಿ: ಆಸ್ತಿಗಾಗಿ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ಎಸ್.ಬಿ.ಸಿದ್ನಾಳ ಕಿರಿಯ ಸೊಸೆ, ಡಾ.ವಿಜಯ ಸಂಕೇಶ್ವರ ಅವರ ಪುತ್ರಿ ದೀಪಾ ಸಿದ್ನಾಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಳಗಾವಿ ನಗರದ ಕ್ಯಾಂಪ್ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 120 ಬಿ, 506, 307ರಡಿ ಪ್ರಕರಣ ದಾಖಲಾಗಿದೆ. ವಿಜಯಕಾಂತ್ ಹಾಲಿನ ಡೇರಿ ಕಬಳಿಸಲು ಮಾಟ ಮಂತ್ರದ ಹುನ್ನಾರ ನಡೆದಿದೆ ಎಂದು ದೀಪಾ ಆರೋಪಿಸಿದ್ದಾರೆ.
ವಿಜಯಕಾಂತ ಹಾಲಿನ ಡೇರಿ ಶಿವಕಾಂತ್ ಸಿದ್ನಾಳ ಹಾಗೂ ಡಾ.ವಿಜಯಸಂಕೇಶ್ವರ್ ಪಾಲುದಾರಿಕೆಯಲ್ಲಿದೆ. ಇತ್ತೀಚೆಗಷ್ಟೇ ಉದ್ಯಮಿ ಶಿವಕಾಂತ್ ಸಿದ್ನಾಳ ಅನಾರೋಗ್ಯದಿಂದ ಮೃತಪಟ್ಟಿದ್ದರು. ಉದ್ಯಮಿ ಶಿವಕಾಂತ್ ಸಿದ್ನಾಳ ಅವರ ಸಾವಿಗೆ ಮಾಟ ಮಂತ್ರವೇ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ. ಶಿವಕಾಂತ್ ಸಮಾಧಿಯ ಸುತ್ತಲೂ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಶಿವಾಕಾಂತ್ ಪತ್ನಿ ದೀಪಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೃತ ಶಿವಕಾಂತ್ ಸಹೋದರ ಶಶಿಕಾಂತ್ ಸಿದ್ನಾಳ, ಪತ್ನಿ ವಾಣಿ ಸಿದ್ನಾಳ, ಮಗ ದಿಗ್ವಿಜಯ್ ಸಿದ್ನಾಳ ವಿರುದ್ಧ ದೀಪಾ ಸಿದ್ನಾಳ ದೂರು ನೀಡಿದ್ದಾರೆ.
ಕರ್ನಾಟಕದ ಆದಿತ್ಯ ಮಿಲ್ಕ್ ಸಂಸ್ಥಾಪಕರಾಗಿದ್ದ ಉದ್ಯಮಿ ಶಿವಕಾಂತ್ ಸಿದ್ನಾಳ್ ಅವರನ್ನು 2002ರಲ್ಲಿ ವಿಜಯ್ ಸಂಕೇಶ್ವರ್ ಪುತ್ರಿ ದೀಪಾ ವಿವಾಹವಾಗಿದ್ದರು. 2006ರಲ್ಲಿ ಬೈಲಹೊಂಗಲ ತಾಲೂಕಿನ ನೇಗಿನಾಳ ಬಳಿ ಶಿವಕಾಂತ್, ವಿಜಯಕಾಂತ ಹಾಲಿನ ಡೇರಿ ಸ್ಥಾಪಿಸಿದ್ದರು. ವಿಜಯಕಾಂತ ಡೇರಿಗೆ ಡಾ.ವಿಜಯ ಸಂಕೇಶ್ವರ ಚೇರ್ ಮೆನ್ ಆಗಿದ್ದರು. ಶಿವಕಾಂತ್ ಸಿದ್ನಾಳ್ ಪಾಲುದಾರಿಕೆ ಹೊಂದಿದ್ದರು. ಎರಡು ತಿಂಗಳ ಹಿಂದೆ ಶಿವಕಾಂತ ಸಿದ್ನಾಳ್ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಇದೀಗ ಶಿವಕಾಂತ್ ಸಿದ್ನಾಳ್ ಪತ್ನಿ ದೀಪಾ, ಶಶಿಕಾಂತ್ ಸಿದ್ನಾಳ್ ಕುಟುಂಬದ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಬೆಳಗಾವಿ ಕಮಿಷ್ನರ್ ಇಡಾ ಮಾರ್ಟಿನ್ ತಿಳಿಸಿದ್ದಾರೆ.