
ಬಾಗಲಕೋಟೆ: ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಯುಗಾದಿ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿದ ಅವರು ನಂತರ ಮಾತನಾಡಿ, ಕೆಲವರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಹೇಳಿದ್ದಾರೆ. ಮತ್ತೆ ಕೆಲವರು ಸ್ಥಾನಮಾನ ನೀಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ. ಇನ್ನು ಕೆಲವು ಬೆಂಬಲಿಗರು ತಟಸ್ಥರಾಗಿ ಉಳಿಯುವಂತೆ ಹೇಳುತ್ತಿದ್ದಾರೆ ಎಂದರು.
ಅವರವರ ಭಾಗದಲ್ಲಿ ಸರ್ವೆ ಮಾಡಿಸುವಂತೆ ಬೆಂಬಲಿಗರಿಗೆ ಸೂಚಿಸಿದ್ದೇನೆ. ಸರ್ವೇ ವರದಿ ನೋಡಿ ಯುಗಾದಿ ಬಳಿಕ ಮುಂದಿನ ತೀರ್ಮಾನ ತಿಳಿಸುತ್ತೇನೆ. ಸಚಿವ ಶಿವಾನಂದ ಪಾಟೀಲ್ ಮತ್ತು ಸಂಯುಕ್ತಾ ಪಾಟೀಲ್ ಅವರು ಮನೆಗೆ ಬಂದರೆ ಕೂರಿಸಿ ಮಾತನಾಡುತ್ತೇನೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ತಿಳಿಸುತ್ತೇನೆ. ಬಳಿಕ ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಬಾಗಲಕೋಟೆಯ ನವನಗರ ನಿವಾಸದ ಬಳಿ ವೀಣಾ ಕಾಶಪ್ಪನವರ್ ಹೇಳಿದ್ದಾರೆ.