ಬೆಂಗಳೂರು: ಜಮ್ಮು ಕಾಶ್ಮೀರದ ಮಾತಾ ವೈಷ್ಣೋದೇವಿ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ 5,000 ರೂ. ಸಹಾಯಧನ ನೀಡಲು ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ.
10 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಎಸ್ ಬಿಲ್ಡಿಂಗ್ ಎದುರು ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಧಾರ್ಮಿಕ ಸೌಧ ಭವನ ನಿರ್ಮಾಣ ಮಾಡಲು ಸಭೆ ತೀರ್ಮಾನ ಕೈಗೊಂಡಿದೆ.
ಮೈಸೂರಿನ ಸಂಸ್ಕೃತ ಮಹಾರಾಜ ಕಾಲೇಜು ಸಂಸ್ಥೆಯ ಸಂಪೂರ್ಣ ಜೀರ್ಣೋದ್ಧಾರಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಸಭೆ ನಿರ್ಧಾರ ಕೈಗೊಂಡಿದೆ.
ಮಕ್ಕಳಿಗೆ ನೀಡುತ್ತಿರುವ ವಿದ್ಯಾ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಿಸಿ ಡಿಸೆಂಬರ್ 31ರವರೆಗೂ ಕಾಲಾವಕಾಶ ಕಲ್ಪಿಸಲಾಗಿದೆ.