
ಬೆಂಗಳೂರು: ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನ ಕುರಿತು ಚರ್ಚೆ ನಡೆಸಲಾಗುವುದು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಬಹುನಿರೀಕ್ಷಿತ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಮಂಡನೆ ಆಗುವುದಿಲ್ಲ. ಸಭೆಯ ಅಜೆಂಡಾದಲ್ಲಿ ಜಾತಿ ಗಣತಿ ವರದಿ ವಿಷಯವನ್ನು ಪ್ರಸ್ತಾಪಿಸಿಲ್ಲ. ಈ ಮೂಲಕ ಜಾತಿ ಗಣತಿ ವರದಿ ಮಂಡನೆ ಮುಹೂರ್ತ ಮತ್ತೊಮ್ಮೆ ಮುಂದೂಡಿಕೆಯಾದಂತಾಗಿದೆ.
ಮಂಗಳವಾರವಷ್ಟೇ ಹಿಂದುಳಿದ ವರ್ಗದ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿ ಜಾರಿಯ ಬಗ್ಗೆ ಘೋಷಿಸಿದ್ದರು. ತುಂಬಾ ದಿನಗಳಿಂದ ಜಾತಿ ಗಣತಿ ವರದಿ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳುವುದು ಮುಂದೂಡಿಕೆಯಾಗುತ್ತಿದೆ. ಇಂದಿನ ಸಚಿವ ಸಂಪುಟ ಸಭೆಯ ಅಜೆಡಾದಲ್ಲಿ ಜಾತಿ ಗಣತಿ ವರದಿ ವಿಷಯ ಪ್ರಸ್ತಾಪಿಸಿಲ್ಲ. ಹೆಚ್ಚುವರಿ ವಿಷಯವಾಗಿ ಕೊನೆ ಕ್ಷಣದಲ್ಲಿ ಜಾತಿ ಗಣತಿ ವರದಿ ಮಂಡನೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.