ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ಬೆಳಾಲು ಸಮೀಪದ ಕೆಂಪನೊಟ್ಟು ಬಳಿ ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಪೊಲೀಸರು ಮೃತ ಮಹಿಳೆಯ ಪತಿಯನ್ನು ವಶಕ್ಕೆ ಪಡೆದಿದ್ದಾರೆ.
27 ವರ್ಷದ ಶಶಿಕಲಾ ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ಶಶಿಕಲಾ ಮತ್ತು ಅವರ ಪತಿ ಸುಧಾಕರ ನಾಯ್ಕ್ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಗೆ ಒಬ್ಬಳೇ ಮಗಳಿದ್ದು, ತಾಯಿ ಮನೆಗೆ ಹೋಗಿದ್ದಾಳೆ. ಸುಧಾಕರ್ ರಬ್ಬರ್ ಟ್ಯಾಪಿಂಗ್ ಮಾಡಲು ಹೋಗಿದ್ದು, ವಾಪಸ್ ಬಂದಾಗ ಬಾವಿಯಲ್ಲಿ ಶಶಿಕಲಾ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಿಂದ ಮೃತದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆ ಪ್ರಕರಣ ಶಂಕೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆ ಪೊಲೀಸರು ಸುಧಾಕರ ನಾಯ್ಕ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.