
ಮಂಗಳೂರು: ಬಿಲ್ ಪಾವತಿಸದೆ ಮೃತದೇಹ ಕೊಡಲ್ಲ ಎಂದು ಖಾಸಗಿ ಆಸ್ಪತ್ರೆ ಸತಾಯಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೊನೆಗೆ ಆಸ್ಪತ್ರೆ ವಿರುದ್ಧ DYFI ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಬಳಿಕ ಮೃತದೇಹ ಕೊಡಲಾಗಿದೆ.
ಕೆಪಿಎಂಇ ಕಾಯ್ದೆ ಪ್ರಕಾರ ಯಾವುದೇ ಕಾರಣಕ್ಕೂ ಮೃತದೇಹ ಇಟ್ಟುಕೊಳ್ಳಲು ಅವಕಾಶವಿಲ್ಲ. ಆದರೆ, ಕಾಯ್ದೆಯನ್ನು ಉಲ್ಲಂಘಿಸಿದ ಆಸ್ಪತ್ರೆಯವರು ಶುಲ್ಕ ಪಾವತಿಸದೆ ಮೃತದೇಹ ಕೊಡುವುದಿಲ್ಲವೆಂದು ಹೇಳಿದ್ದು, ಇದನ್ನು ತಿಳಿದ ಡಿ.ವೈ.ಎಫ್.ಐ. ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಸ್ಪತ್ರೆಯಿಂದ ಮೃತದೇಹ ಪಡೆದು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಮೂಡಬಿದರೆಯ ಮಹಾಬಲ ಎಂಬುವರಿಗೆ ಉಸಿರಾಟ ತೊಂದರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೃದಯದಲ್ಲಿ ಸಮಸ್ಯೆ ಇರುವುದಾಗಿ ಆಸ್ಪತ್ರೆಯ ವೈದ್ಯರು ಬೈಪಾಸ್ ಸರ್ಜರಿ ಮಾಡಿದ್ದು, ನಂತರ ಅವರ ಆರೋಗ್ಯದಲ್ಲಿ ಏರುಪೇರಾಗಿ ಶನಿವಾರ ಸಂಜೆ ಮೃತಪಟ್ಟಿದ್ದಾರೆ.
5.5 ಲಕ್ಷ ರೂಪಾಯಿ ಆಸ್ಪತ್ರೆಯ ಶುಲ್ಕ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆಯವರು ಹೇಳಿದ್ದು, ಇದರಿಂದಾಗಿ ಕುಟುಂಬದವರು ಕಂಗಾಲಾಗಿದ್ದಾರೆ. ಕೊನೆಗೆ DYFI ಕಾರ್ಯಕರ್ತರ ಮಧ್ಯಪ್ರವೇಶದಿಂದ ಮೃತದೇಹ ಹಸ್ತಾಂತರಿಸಲಾಗಿದೆ.