ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ವಶದಲ್ಲಿರುವ ವಕೀಲ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನನ್ನು ಕರೆಸಿ ದೊಡ್ಡಮಟ್ಟದ ಆಫರ್ ನೀಡಿದ್ದರು ಎಂದು ಹೇಳಿದ್ದಾರೆ. ಪ್ರಕರಣದ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೈವಾಡವಿದೆ. ಮೋದಿ, ಬಿಜೆಪಿ, ಹೆಚ್.ಡಿ. ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು 100 ಕೋಟಿ ರೂಪಾಯಿ ಆಫರ್ ಮಾಡಿದ್ದರು ಎಂದು ಹಾಸನದಲ್ಲಿ ದೇವರಾಜೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಡಿಸಿಎಂ ಡಿಕೆ ನನ್ನನ್ನು ಕರೆಸಿ ದೊಡ್ಡ ಮಟ್ಟದ ಆಫರ್ ನೀಡಿದ್ದರು. ಒಪ್ಪದಿದ್ದಾಗ ಅಟ್ರಾಸಿಟಿ, ಲೈಂಗಿಕ ಕಿರುಕುಳ ಕೇಸ್ ಹಾಕಿಸಿದರು. ಸಾಕ್ಷ್ಯ ಸಿಗಲಿಲ್ಲ. ರೇಪ್ ಕೇಸ್ ಹಾಕಿಸಿದರು. ಅದರಲ್ಲಿಯೂ ಸಾಕ್ಷ್ಯ ಸಿಗಲಿಲ್ಲ. ಪೆನ್ ಡ್ರೈವ್ ಕೇಸ್ ನಲ್ಲಿ ನನ್ನನ್ನು ಲಾಕ್ ಮಾಡುತ್ತಿದ್ದಾರೆ. ಇದೆಲ್ಲದರ ಹಿಂದೆ ಡಿ.ಕೆ. ಶಿವಕುಮಾರ್ ಕೈವಾಡವಿದೆ ಎಂದು ಹೇಳಿದ್ದಾರೆ.
ನಾನು ಕೂಡ ಕಾನೂನು ಹೋರಾಟ ಮಾಡುತ್ತೇನೆ. ಡಿ.ಕೆ. ಶಿವಕುಮಾರ್ ರನ್ನು ಜೈಲಿಗೆ ಕಳುಹಿಸುತ್ತೇನೆ. 5 ಕೋಟಿ ರೂಪಾಯಿ ಅಡ್ವಾನ್ಸ್ ಅನ್ನು ಬೌರಿಂಗ್ ಕ್ಲಬ್ ನ 110ನೇ ರೂಮ್ ಗೆ ಕಳುಹಿಸಿ ಕೊಟ್ಟಿದ್ದರು. ನನಗೆ ನೂರು ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ನಾಲ್ಕು ಜನರ ಮಂತ್ರಿಗಳ ಸಮಿತಿಯನ್ನು ರಚಿಸಿದ್ದರು. ಕೃಷ್ಣ ಭೈರೇಗೌಡ, ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ಇನ್ನೊಬ್ಬ ಸಚಿವರನ್ನು ಡಿ.ಕೆ. ಶಿವಕುಮಾರ್ ನೇಮಿಸಿದ್ದರು ಎಂದು ಡಿಕೆ ವಿರುದ್ಧ ಸ್ಪೋಟಕ ಆರೋಪ ಮಾಡಿದ್ದಾರೆ.