ಗ್ರಾಮದಲ್ಲಿ ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆಯನ್ನು ಆರಂಭಿಸದಂತೆ ಪ್ರತಿಭಟನೆ ನಡೆಸಿದರೂ ಕೂಡ ಇದಕ್ಕೆ ಮನ್ನಣೆ ನೀಡದೆ ಬಾರ್ ಆರಂಭಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ತರಗನಹಳ್ಳಿಯಲ್ಲಿ ನಡೆದಿದೆ.
ಈ ಗ್ರಾಮದಲ್ಲಿ ದೇವಸ್ಥಾನ, ಶಾಲೆ ಹಾಗೂ ಕಿರು ಆರೋಗ್ಯ ಸಹಾಯಕಿಯರ ವಸತಿ ಗೃಹವಿದ್ದು, ಇದರ ಸಮೀಪದಲ್ಲೇ ಬಾರ್ ಆರಂಭವಾಗಿದೆ. ಇಲ್ಲಿ ಮದ್ಯ ಖರೀದಿಸುವವರು ಅಕ್ಕಪಕ್ಕದ ಜಮೀನುಗಳಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಅಲ್ಲದೆ ಕುಡುಕರ ಕಾಟದಿಂದ ಹೆಣ್ಣು ಮಕ್ಕಳು ಓಡಾಡುವುದೇ ದುಸ್ತರವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಜಮೀನುಗಳಲ್ಲಿ ಬಾಟಲಿಗಳನ್ನು ಬಿಸಾಡಿ ಹೋಗುತ್ತಿರುವುದರಿಂದ ವ್ಯವಸಾಯ ಮಾಡುವುದು ಕಷ್ಟವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದು, ಸ್ಥಳಕ್ಕೆ ಆಗಮಿಸಿದ ಅಬಕಾರಿ ಇನ್ಸ್ಪೆಕ್ಟರ್ ಚೇತನ್, ಮದ್ಯ ಮಾರಾಟ ಮಳಿಗೆಗೆ ಬೀಗ ಜಡಿರುವುದು ಕಾನೂನು ಬಾಹಿರ. ನಿಮ್ಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಆಗ ಗ್ರಾಮಸ್ಥರು ನಮ್ಮ ಸಮಸ್ಯೆ ಪರಿಹರಿಸುವುದನ್ನು ಬಿಟ್ಟು ನಮ್ಮನ್ನೇ ಬೆದರಿಸುತ್ತಿದ್ದೀರಾ ಎಂದು ಹೇಳಿದಾಗ ಅಬಕಾರಿ ಇನ್ಸ್ಪೆಕ್ಟರ್ ವಾಪಸ್ ತೆರಳಿದ್ದಾರೆ.