ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶದ ಅತಿದೊಡ್ಡ ಮಾನಹಾನಿ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣ. ಇದಕ್ಕೆ ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕುಟುಂಬವೇ ನೇರ ಹೊಣೆ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರ ಡಿ.ಕೆ ಸಹೋದರರಿಗೆ ಮೊದಲೇ ಗೊತ್ತಿತ್ತು ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮಗೆ ವಿಷಯ ಗೊತ್ತಿದ್ದರೇ ಈ ವಿಚಾರ ಇನ್ನು ಮುಂಚೆಯೇ ಹೊರ ಬರುತ್ತಿತ್ತು. ಆರೋಪ ಮಾಡಬೇಕು ಎಂಬ ಕಾರಣಕ್ಕೆ ನಮ್ಮ ಹೆಸರು ಹೇಳುತ್ತಿದ್ದಾರೆ ಎಂದರು.
ಗುಸು ಗುಸು ಸುದ್ದಿ ಹಾಸನದಲ್ಲಿ ಇತ್ತು. ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಉನ್ನತ ನಾಯಕರಿಗೆ ಪತ್ರ ಬರೆದಿದ್ದರು. ಪ್ರಕರಣದ ಬಗ್ಗೆ ಪ್ರಧಾನಿಗಳು ಹಾಗೂ ಅವರ ಕಾರ್ಯಾಲಯ ಮತ್ತು ಕುಟುಂಬಕ್ಕೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಎನ್ ಡಿಎ ಅಭ್ಯರ್ಥಿಯನ್ನಾಗಿ ಮಾಡಿ. ಇಡೀ ದೇಶದಲ್ಲೇ ಕನ್ನಡಿಗರಿಗೆ, ಹಾಸನ ಜಿಲ್ಲೆಗೆ ಅವಮಾನ ಮಾಡಿದ್ದಾರೆ. ತಮಗೆ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಪ್ರಜ್ವಲ್ ಅವರ ತಂದೆ ರೇವಣ್ಣ ಅವರೇ ಹಳೆಯ ವಿಡಿಯೋಗಳು ಎಂದು ಒಪ್ಪಿಕೊಂಡಿದ್ದಾರೆ. ಎಲ್ಲದಕ್ಕೂ ಮೊದಲು ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಮೊದಲ ಕೆಲಸ. ಇಲ್ಲಿ ಸುಮಾರು 500 ಕ್ಕೂ ಹೆಚ್ಚು ಮಹಿಳೆಯರು ಶೋಷಣೆಗೆ ಒಳಗಾಗಿದ್ದಾರೆ. ಸ್ವತಃ ಪ್ರಧಾನಿಗಳೇ ಇದನ್ನು ಬೇರೆಯ ರೀತಿ ಬಿಂಬಿಸಲು ಹೊರಟಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ವಿಚಾರ ಗೊತ್ತಿದ್ದರೂ ಮುಚ್ಚಿಟ್ಟಿರುವುದು ಮಹಾ ಅಪರಾಧ ಎಂದು ಕಿಡಿಕಾರಿದರು.