ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಆಸ್ತಿ ಹಂಚಿಕೆ ಮಾಡುತ್ತಾರೆ, ಮಹಿಳೆಯರ ಮಾಂಗಲಸೂತ್ರವನ್ನೂ ಮುಸ್ಲಿಂಮರಿಗೆ ಕೊಡುತ್ತಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ದೇಶದ ಪ್ರಧಾನಿಯಾಗಿ ಸಂವಿಧನದ ಅರಿವಿರಬೇಕು ಎಂದು ಟಾಂಗ್ ನೀಡಿದ್ದಾರೆ.
ಮುಸ್ಲಿಂ ತುಷ್ಠೀಕರಣದ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಪ್ರಧಾನಿಗಳು ಈ ದೇಶದ ಮಹತ್ವದ ಹುದ್ದೆಯಲ್ಲಿ ಕುಳಿತಿರುವವರು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಈ ದೇಶದ ಎಲ್ಲಾ ನಾಗರಿಕರು ಸಮಾನರು ಎನ್ನುವ ಅರಿವು ಇರಬೇಕು ಎಂದರು.
ಬೇಧ, ಭಾವ ಮಾಡುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಇದು ಇಡೀ ದೇಶ ಮತ್ತು ಪ್ರಪಂಚಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಕಿಡಿಕಾರಿದರು.
ನಮ್ಮದು ಸರ್ವ ಜನಾಂಗದ ತೋಟ. ಮುಸ್ಲಿಂ ಧರ್ಮಿಯರಿಗೆ ಚಿತ್ರಹಿಂಸೆ ನೀಡಿ ಈ ದೇಶ ಬಿಟ್ಟು ಹೋಗಬೇಕು ಎನ್ನುವಂತಹ ವಾತಾವರಣ ಬಿಜೆಪಿ ನಿರ್ಮಾಣ ಮಾಡುತ್ತಿದೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಿದ್ದಾರೆ. ನಾವು ಸಂವಿಧಾನದ ಪ್ರಕಾರ ನಡೆಯುತ್ತಿದ್ದೇವೆ. ಆದ ಕಾರಣ ಯಾವುದೇ ಅಪರಾಧ ಪ್ರಕರಣ ನಡೆದರೂ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯವೇ ಇಲ್ಲ ಎಂದರು.
ಇದೇ ವೇಳೆ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪ, ಪ್ರತಿಭಟನೆ ವಿಚರವಾಗಿ ಮಾತನಾಡಿದ ಡಿಸಿಎಂ, ಪಾಪ ಅವರುಗಳು ಯಾವ ಕೆಲಸವನ್ನೂ ಮಾಡಿಲ್ಲವಲ್ಲ ಅದಕ್ಕೆ ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಫೇಲ್ ಆಯಿತು. ಈಗ ದೊಡ್ಡ ಎಂಜಿನ್ ಕೂಡ ಫೇಲ್ ಆಗುತ್ತದೆ ಎಂದು ವ್ಯಂಗ್ಯವಾಡಿದರು.