ಬೆಂಗಳೂರು: ಒಕ್ಕಲಿಗರು ಮಾತ್ರವಲ್ಲ, ಎಲ್ಲಾ ಸಮುದಾಯದವರೂ ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಒಕ್ಕಲಿಗರಾಗಲಿ, ಬೇರೆ ಸಮುದಾಯದವರಾಗಲಿ ಯಾರೂ ದಡ್ಡರಲ್ಲ. ತಮಗೆ ಯಾರು ಅನುಕೂಲ ಮಾಡಿಕೊಡಲಿದ್ದಾರೆ ಹಾಗೂ ದೇಶಕ್ಕೆ ಯಾರು ಸೂಕ್ತ ಎಂದು ನೋಡುತ್ತಾರೆ. ತಮಗೆ, ರಾಜ್ಯಕ್ಕೆ, ದೇಶಕ್ಕೆ ಯಾರು ಉತ್ತಮರು ಎಂದು ಜನ ಆಲೋಚನೆ ಮಾಡುತ್ತಾರೆ. ಜನ ಅವರ ಬದುಕು ನೋಡುತ್ತಾರೆ ಹೊರತು, ಭಾವನೆ ನೋಡುವುದಿಲ್ಲ ಎಂದರು.
ಒಕ್ಕಲಿಗ ಸರ್ಕಾರ ಬೀಳಿಸಿದ ವಿಚಾರವಾಗಿ ಸ್ವಾಮೀಜಿ ಉತ್ತರ ಕೊಡಬೇಕು ಎಂಬ ಹೇಳಿಕೆ ಬಗ್ಗೆ ಚರ್ಚೆಯಾಗುತ್ತಿದೆ ಈ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸರ್ಕಾರ ಬೀಳಿಸಿದವರನ್ನೇ ಸ್ವಾಮೀಜಿಗಳ ಬಳಿ ಕರೆದುಕೊಂಡು ಹೋದರೆ ಸಮಾಜಕ್ಕೆ ಏನು ಉತ್ತರ ನೀಡುತ್ತಾರೆ?; ಎಂದು ಪ್ರಶ್ನಿಸಿದರು.
ಈ ವಿಚಾರವಾಗಿ ಸ್ವಾಮೀಜಿಗಳು ಉತ್ತರ ನೀಡಬೇಕು ಎಂದು ನಾನು ಕೇಳಿಲ್ಲ. ಕುಮಾರಸ್ವಾಮಿ ಹಾಗೂ ಕೆಲವು ಮಂತ್ರಿಗಳು ಸ್ವಾಮೀಜಿಗಳ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವ ವೇಳೆಗೆ ಆಪರೇಷನ್ ಕಮಲ ನಡೆದಿತ್ತು. ಸ್ವಾಮೀಜಿಗಳಿಗೂ ಒಕ್ಕಲಿಗ ವ್ಯಕ್ತಿ ಸಿಎಂ ಆಗಿರುವ ಬಗ್ಗೆ ಅಭಿಮಾನ ಇರುತ್ತದೆ. ಆದರೆ ಈಗ ಒಕ್ಕಲಿಗ ಸಿಎಂ ಅನ್ನು ತೆಗೆದವರನ್ನೇ ಜತೆಗೆ ಕರೆದುಕೊಂಡು ಹೋದರೆ ಹೇಗೆ? ಸ್ವಾಮೀಜಿಗಳ ಆಶೀರ್ವಾದ ಎಲ್ಲರಿಗೂ ಬೇಕು. ಹೀಗಾಗಿ ಚೆಲುವರಾಯಸ್ವಾಮಿ ಅವರು ನಮ್ಮ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿದ್ದರು. ಅದೇ ರೀತಿ ಇವರು ಕೂಡ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಕುಮಾರಸ್ವಾಮಿ, ಮಂಜುನಾಥ್ ಅವರು ಸ್ವಾಮೀಜಿಗಳ ಆಶೀರ್ವಾದ ಕೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ ಸರ್ಕಾರ ತೆಗೆದವರನ್ನೇ ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಅವರು ಸಮಾಜಕ್ಕೆ ಏನು ಉತ್ತರ ನೀಡುತ್ತಾರೆ ಎಂದಷ್ಟೇ ನಾನು ಕೇಳಿದೆ ಎಂದು ತಿಳಿಸಿದರು.
ಸದ್ಯಕ್ಕೆ ಜೆಡಿಎಸ್ ಎಲ್ಲಿದೆ? ಜೆಡಿಎಸ್ ಗೆ ಅವರೇ ಮುಕ್ತಿ ಕೊಟ್ಟಿದ್ದಾರೆ. ಜೆಡಿಎಸ್ ಇರಬೇಕು ಎಂಬ ಆಸೆ ನನಗಿದೆ. ಆದರೆ ಅಳಿಯನನ್ನೇ ಬಿಜೆಪಿಗೆ ಕಳುಹಿಸಿ ಜೆಡಿಎಸ್ ವಿಸರ್ಜನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ನಾವು ಹಿಂದೆ ಒಂದು ತಪ್ಪು ಮಾಡಿದ್ದೆವು. ಆದರೆ ಈಗ ಅದಕ್ಕಿಂತ ದೊಡ್ಡ ತಪ್ಪು ಜೆಡಿಎಸ್ ನವರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.