ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ವೇದ ಪಂಡಿತರ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದ್ದು, ವಿಶೇಷ ಸಂಗತಿ ಎಂದರೆ ಇಲ್ಲಿ ಆಟಗಾರರು ಪರಸ್ಪರ ಸಂಸ್ಕೃತದಲ್ಲಿ ಸಂಭಾಷಣೆ ನಡೆಸುತ್ತಾರೆ. ಅಷ್ಟೇ ಅಲ್ಲ ವೀಕ್ಷಕ ವಿವರಣೆಯನ್ನು ಸಹ ಸಂಸ್ಕೃತದಲ್ಲಿ ನೀಡಲಾಗುತ್ತಿದೆ.
ಮಹರ್ಷಿ ಮಹೇಶ್ ಯೋಗಿಯವರ ಜನ್ಮದಿನದ ನಿಮಿತ್ತ ಈ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದ್ದು, ಆಟಗಾರರು ಸಾಂಪ್ರದಾಯಿಕ ಧೋತಿ ಮತ್ತು ಕುರ್ತಾ ಧರಿಸಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ಪಾಲ್ಗೊಂಡಿರುವ ಅಂಪೈರ್ ಸಹ ತೀರ್ಪನ್ನು ಸಂಸ್ಕೃತದಲ್ಲಿ ನೀಡುತ್ತಿದ್ದಾರೆ.
ಭೋಪಾಲ್ ನ ಅಂಕುರ್ ಮೈದಾನದಲ್ಲಿ ಈ ಟೂರ್ನಮೆಂಟ್ ನಡೆಯುತ್ತಿದ್ದು, ಪಂದ್ಯ ಆರಂಭಕ್ಕೂ ಮುನ್ನ ವೇದಗಳ ಅನುಸಾರ ಕ್ರೀಡಾಪಟುಗಳು ವಿಧಿ ವಿಧಾನಗಳನ್ನು ಅನುಸರಿಸಿದ್ದಾರೆ. ಮಹತ್ವದ ಸಂಗತಿ ಎಂದರೆ ಮಹರ್ಷಿ ಕಪ್ ಮೂರನೇ ವರ್ಷದಲ್ಲಿ ನಡೆಯುತ್ತಿದೆ.
ಸಂಸ್ಕೃತವನ್ನು ಮತ್ತಷ್ಟು ಉತ್ತೇಜಿಸಲು ಹಾಗೂ ವೇದ ಪಂಡಿತರ ಕುಟುಂಬಕ್ಕೆ ಕ್ರೀಡಾ ಉತ್ಸಾಹ ತುಂಬಲು ಈ ಟೂರ್ನಿಯನ್ನು ಆಯೋಜಿಸಲಾಗಿದ್ದು, ವಿಜೇತ ತಂಡಕ್ಕೆ ನಗದು ಬಹುಮಾನದ ಜೊತೆಗೆ ವೇದ ಪುಸ್ತಕಗಳು ಹಾಗೂ ಪಂಚಾಂಗವನ್ನು ನೀಡಲಾಗುತ್ತದೆ.