ಕೊರೋನಾ ಸಾಂಕ್ರಾಮಿಕವು ಆರೋಗ್ಯದ ಮೇಲೆ ಮಾತ್ರವಲ್ಲದೆ ಸಮಾಜದ ಪ್ರತಿಯೊಂದು ಅಂಶಗಳ ಮೇಲೂ ಆಳವಾದ ಪರಿಣಾಮ ಬೀರಿದೆ. ಈ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಿದೆ. ಸಂಶೋಧಕರು ಇತ್ತೀಚೆಗೆ ಪ್ರಕಟಿಸಿದ ಅಧ್ಯಯನದಲ್ಲಿ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕೋವಿಡ್‌ನಿಂದಾಗಿ ವಿಶ್ವದ ವಿವಿಧ ಪ್ರದೇಶಗಳಲ್ಲಿ ಜನರ ಸರಾಸರಿ ವಯಸ್ಸು ಕಡಿಮೆಯಾಗಿದೆ.
ಸಂಶೋಧನೆಯ ಪ್ರಕಾರ ಕೊರೋನಾ, ಜಾಗತಿಕ ಜೀವಿತಾವಧಿಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿಯ ಪ್ರಕಾರ ಜಾಗತಿಕ ಜೀವಿತಾವಧಿಯು 2019 ಮತ್ತು 2021ರ ನಡುವೆ 1.6 ವರ್ಷಗಳಷ್ಟು ಕಡಿಮೆಯಾಗಿದೆ. ಈ ಅಂಕಿ ಅಂಶವು ಆರೋಗ್ಯ ಸುಧಾರಣೆಯ ಹಿಂದಿನ ಪ್ರವೃತ್ತಿಗಳಿಂದ ಹಠಾತ್ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ಈ ಅಂಕಿ-ಅಂಶಗಳು ವಯಸ್ಕರ ಪಾಲಿಗೆ ಭಯಾನಕವಾಗಿವೆ. ಆದರೆ ಮಕ್ಕಳ ಮರಣ ದರದಲ್ಲಿ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ. 2019ಕ್ಕೆ ಹೋಲಿಸಿದರೆ 2021ರಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವು 7 ಪ್ರತಿಶತದಷ್ಟು ಕಡಿಮೆಯಾಗಿದೆ ಎಂಬುದು ಅಧ್ಯಯನದಲ್ಲಿ ಬಹಿರಂಗವಾಗಿದೆ. ಅಂಕಿ-ಅಂಶಗಳ ಪ್ರಕಾರ 2021 ರಲ್ಲಿ 5 ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ 2019ಕ್ಕಿಂತ ಅರ್ಧ ಮಿಲಿಯನ್‌ನಷ್ಟು ಕಡಿಮೆಯಾಗಿದೆ.
ಯಾವ ದೇಶದ ಮೇಲಾಗಿದೆ ಹೆಚ್ಚಿನ ಪರಿಣಾಮ?
ಜೋರ್ಡಾನ್ ಮತ್ತು ನಿಕರಾಗುವಾ ಸೇರಿದಂತೆ ಅನೇಕ ದೇಶಗಳಲ್ಲಿ ಕೊರೋನಾದಿಂದ ಮರಣ ಪ್ರಮಾಣ ಹೆಚ್ಚಾಗಿದೆ. ಇದಲ್ಲದೆ ದಕ್ಷಿಣ ಆಫ್ರಿಕಾದ ಕೆಲವು ಪ್ರಾಂತ್ಯಗಳಾದ ಕ್ವಾಝುಲು-ನಟಾಲ್ ಮತ್ತು ಲಿಂಪೊಪೊಗಳಲ್ಲಿ ಜೀವಿತಾವಧಿಯು ಕುಸಿದಿದೆ. ಬಾರ್ಬಡೋಸ್, ನ್ಯೂಜಿಲೆಂಡ್, ಆಂಟಿಗುವಾ ಮತ್ತು ಬಾರ್ಬುಡಾದಂತಹ ದೇಶಗಳಲ್ಲಿ ಕೋವಿಡ್ ಸಮಯದಲ್ಲಿ ಸಾವಿನ ಪ್ರಮಾಣವು ಇತರ ದೇಶಗಳಿಗಿಂತ ಕಡಿಮೆಯಿತ್ತು. ಕೋವಿಡ್, 2020 ಮತ್ತು 2021ರಲ್ಲಿ ಪ್ರಪಂಚದಾದ್ಯಂತ ಸುಮಾರು 16 ಮಿಲಿಯನ್ ಜನರನ್ನು ಬಲಿ ತೆಗೆದುಕೊಂಡಿದೆ. ಕಳೆದ 70 ವರ್ಷಗಳಲ್ಲಿ ಜನನದ ಜೀವಿತಾವಧಿಯು ಸರಿಸುಮಾರು 23 ವರ್ಷಗಳಷ್ಟು ಹೆಚ್ಚಾಗಿತ್ತು.