
ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಗೆ ದಂಪತಿಯಿಬ್ಬರು ವ್ಯಕ್ತಿಯೋರ್ವರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಾಯಿ ಬೊಗಳಿದ ವಿಚಾರವಾಗಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆ ಆರಂಭವಾಗಿದೆ. ನಾಯಿ ಬೊಗಳಿದ್ದಕ್ಕೆ ಪಕ್ಕದ ಮನೆ ವ್ಯಕ್ತಿ ಬೈದ ಎಂದು ದಂಪತಿಗಳು ಆತನ ಮೇಲೆ ಆಸಿಡ್ ಎರಚಿದ್ದಾರೆ. ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಹಾಳ್ ಕರಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುಂದರ್ ರಾಜ್ ಎಂಬುವವರು ಆಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಕಣ್ಣು, ಮುಖಕ್ಕೆ ಗಾಯಗಳಾಗಿವೆ. ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಪಕ್ಕದ ಮನೆಯವರ ಸಾಕು ನಾಯಿ ಬೊಗಳುತ್ತಿದ್ದುದಕ್ಕೆ ಸುಂದರ್ ರಾಜ್ ಎಂಬುವವರು ಪಕ್ಕದ ಮನೆಯ ದಂಪತಿ ಜೊತೆ ಜಗಳವಾಡಿದ್ದರು. ಅಲ್ಲದೇ ನಾಯಿ ಹೆಸರಲ್ಲಿ ಜೇಮ್ಸ್ ಹಾಗೂ ಮರಿಯಮ್ಮ ಎಂಬುವವರಿಗೆ ಬೈಯ್ಯುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕೋಪಗೊಂಡ ದಂಪತಿ ಸುಂದರ್ ರಾಜ್ ಮೇಲೆ ಆಸಿಡ್ ಎರಚಿದ್ದಾರೆ ಎಂದು ಆರೋಪಿಸಲಾಗಿದೆ.
ದಂಪತಿ ವಿರುದ್ಧ ಎನ್.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ದಂಪತಿ ನಾಪತ್ತೆಯಾಗಿದ್ದಾರೆ.