ನವದೆಹಲಿ: ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಡಿಸೆಂಬರ್ 4ಕ್ಕೆ ಬದಲಾಯಿಸಲಾಗಿದೆ.
ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಮಿಜೋರಾಂ ವಿಧಾನಸಭಾ ಚುನಾವಣೆಯ ಎಣಿಕೆ ದಿನಾಂಕವನ್ನು ಡಿಸೆಂಬರ್ 4 ಕ್ಕೆ ಬದಲಾಯಿಸಿದೆ. ಈ ಮೊದಲು ಡಿಸೆಂಬರ್ 3 ರ ಭಾನುವಾರದಂದು ಮತ ಎಣಿಕೆ ನಡೆಯಬೇಕಿತ್ತು.
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದೊಂದಿಗೆ ಡಿಸೆಂಬರ್ 3 ರಂದು ಮಿಜೋರಾಂ ಚುನಾವಣೆಯ ಫಲಿತಾಂಶ ಪ್ರಕಟಿಸಬೇಕಿತ್ತು. ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಡಿಸೆಂಬರ್ 4 ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.
ಭಾನುವಾರ ಮಿಜೋರಾಂ ರಾಜ್ಯದ ಮತ ಎಣಿಕೆ ದಿನ “ಮಿಜೋ ಕ್ರಿಶ್ಚಿಯನ್ನರ ಪೂಜನೀಯ ದಿನ” ಆಗಿದೆ. ಅವತ್ತೇ ಚುನಾವಣಾ ಆಯೋಗವು ಮತ ಎಣಿಕೆ ದಿನ ನಿಗದಿ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.
ಹಲವಾರು ನಾಗರಿಕ ಸಮಾಜ ಮತ್ತು ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟವಾಗಿರುವ ಎನ್‌ಜಿಒ ಸಮನ್ವಯ ಸಮಿತಿ (ಎನ್‌ಜಿಒಸಿಸಿ) ಸದಸ್ಯರು ಒತ್ತಾಯಿಸಿದ್ದಾರೆ. ಐಜ್ವಾಲ್ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಧಾನ ಕಚೇರಿಗಳಲ್ಲಿ ಶುಕ್ರವಾರ ಪ್ರತಿಭಟನೆಗಳನ್ನು ನಡೆಸಿ ಭಾನುವಾರ ಹೊರತುಪಡಿಸಿ ಯಾವುದೇ ದಿನದಂದು ಮತಗಳನ್ನು ಎಣಿಕೆ ಮಾಡಬೇಕೆಂದು ಒತ್ತಾಯಿಸಿತ್ತು.