
ಚೆನ್ನೈ: ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ತಮಿಳುನಾಡು ಮುಖ್ಯಸ್ಥ ಕೆ. ಆರ್ಮ್‌ಸ್ಟ್ರಾಂಗ್ ಅವರ ಹತ್ಯೆಗೆ ನಿರ್ಣಾಯಕ ಸಾಕ್ಷಿ ಎಂದು ನಂಬಲಾದ ಆರು ಸ್ಮಾರ್ಟ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶನಿವಾರ ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯಿಂದ ನಿಯೋಜಿಸಲಾದ ಸ್ಕೂಬಾ ತಂಡಗಳು ಚೆನ್ನೈ ಮಹಾನಗರ ಪ್ರದೇಶದ ಕೊಸಸ್ಥಲೈಯಾರ್ ನದಿಯಿಂದ ಫೋನ್ ಗಳನ್ನು ಹುಡುಕಿ ಹೊತೆಗೆದಿವೆ. ಆರ್ಮ್‌ಸ್ಟ್ರಾಂಗ್ ಮೇಲಿನ ದಾಳಿಯನ್ನು ಯೋಜಿಸಲು ದಾಳಿಕೋರರು ಫೋನ್‌ಗಳನ್ನು ಬಳಸಿದ್ದಾರೆಂದು ಪೊಲೀಸರು ನಂಬಿದ್ದಾರೆ.
ವಕೀಲ ಮಲರ್ಕೋಡಿ, ಎಐಎಡಿಎಂಕೆ ಕೌನ್ಸಿಲರ್ ಹರಿಧರನ್, ಮಾಜಿ ಬಿಜೆಪಿ ಕಾರ್ಯಾಧ್ಯಕ್ಷ ಅಂಜಲೈ ಎಂಬ ಮೂವರು ವ್ಯಕ್ತಿಗಳ ಬಂಧನದ ನಂತರ ಈ ಬೆಳವಣಿಗೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ತನಿಖಾಧಿಕಾರಿಗಳು ಆರಂಭದಲ್ಲಿ ಬಂಧಿಸಲಾದ ಎಂಟು ಆರೋಪಿಗಳಲ್ಲಿ ಒಬ್ಬರಾದ ಅರುಲ್ ಮತ್ತು ಮಲರ್ಕೋಡಿ ಮತ್ತು ಅಂಜಲೈ ನಡುವೆ ಹಣಕಾಸಿನ ವಹಿವಾಟುಗಳನ್ನು ಪತ್ತೆಹಚ್ಚಿದ್ದಾರೆ. ಈ ವಹಿವಾಟುಗಳು ಕೊಲೆಗೆ ಬಳಸಿದ ಕಂಟ್ರಿ ಬಾಂಬ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಖರೀದಿಗೆ ಸಂಬಂಧಿಸಿವೆ ಎಂದು ನಂಬಲಾಗಿದೆ.
ಪುರಾವೆಗಳನ್ನು ವಿಲೇವಾರಿ ಮಾಡುವಲ್ಲಿ ಹರಿಧರನ್ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಕೋರರಿಗೆ ಆರು ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲು ಅರುಲ್ ಮತ್ತು ಮತ್ತೊಬ್ಬ ಆರೋಪಿ ಹರಿಹರನ್ ಅವರಿಗೆ ಕೆಲಸ ನೀಡಲಾಗಿತ್ತು. ಹತ್ಯೆಯ ನಂತರ ಹರಿಧರನ್ ಫೋನ್‌ಗಳನ್ನು ಸಂಗ್ರಹಿಸಿ, ಹಾನಿಗೊಳಿಸಿ ನದಿಗೆ ಎಸೆದಿದ್ದಾರೆ ಎಂದು ವರದಿಯಾಗಿದೆ.
ಈ ಮಾಹಿತಿಯ ಆಧಾರದ ಮೇಲೆ, ನಾವು ಸ್ಕೂಬಾ ತಂಡಗಳನ್ನು ನಿಯೋಜಿಸಿದ್ದು, ಫೋನ್‌ಗಳನ್ನು ಮರುಪಡೆಯಲು ಸಾಧ್ಯವಾಯಿತು ಎಂದು ಗ್ರೇಟರ್ ಚೆನ್ನೈ ಪೊಲೀಸರು ತಿಳಿಸಿದ್ದಾರೆ.