ನವದೆಹಲಿ: ವಾಣಿಜ್ಯ ಅಡುಗೆ ಅನಿಲದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಇದು ಜನರಿಗೆ ಸರ್ಕಾರದ ಹೊಸ ವರ್ಷದ ಉಡುಗೊರೆ ಎಂದು ವ್ಯಂಗ್ಯವಾಗಿ ಟೀಕಿಸಿದ್ದು, ಇದು ಕೇವಲ ಆರಂಭ ಎಂದು ಹೇಳಿದೆ.
ಹೊಸ ವರ್ಷದ ಮೊದಲ ಉಡುಗೊರೆ, ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಈಗ 25 ರೂ. ದುಬಾರಿಯಾಗಿದೆ. ಇದು ಪ್ರಾರಂಭವಷ್ಟೇ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.
ದೇಶದಲ್ಲಿ ಅಡುಗೆ ಅನಿಲದ ಬೆಲೆಗಳು ಕಳೆದೆರಡು ವರ್ಷಗಳಲ್ಲಿ ಭಾರಿ ಏರಿಕೆ ಕಂಡಿದ್ದು, ಬಡ, ಮಧ್ಯಮ ವರ್ಗದವರಿಗೆ ಹೊರೆಯಾಗಿ ಮನೆಯ ಬಜೆಟ್ ಗಳನ್ನು ಹೆಚ್ಚಿಸಿದೆ. ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹಬಳಕೆದಾರರ ಬೆಲೆ 410 ರೂ.ನಿಂದ 1,000 ರೂ.ಗೆ ಏರಿದೆ. ಇಂಧನ ಬೆಲೆಗಳಲ್ಲಿನ ತ್ವರಿತ ಏರಿಕೆಯೊಂದಿಗೆ ಅಗತ್ಯ ವಸ್ತುಗಳ ದರಗಳನ್ನು ಹೆಚ್ಚಿಸಿತು, ಇದರಿಂದ ಬಡ, ಮಧ್ಯಮ ವರ್ಗದ ಕುಟುಂಬಗಳು ಹೆಣಗಾಡುತ್ತಿವೆ.
ಇಂಧನ ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದಾಗ ಸರ್ಕಾರವು ಕಚ್ಚಾ ತೈಲದ ಅಂತರರಾಷ್ಟ್ರೀಯ ದರಗಳನ್ನು ಎತ್ತಿ ತೋರಿಸಿದೆ. ಈಗ ಅಂತರಾಷ್ಟ್ರೀಯ ದರಗಳು ಇಳಿದಿದ್ದರೂ ದರವನ್ನು ಏಕೆ ಕಡಿತಗೊಳಿಸಿಲ್ಲ ಎಂದು ಪ್ರತಿಪಕ್ಷಗಳು ಪ್ರಶ್ನಿಸುತ್ತಿವೆ.