ಚಿತ್ರದುರ್ಗ: ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಬ್ಯಾಡರಹಳ್ಳಿ ನಿವಾಸಿ ಮೀನಾಕ್ಷಮ್ಮ(63) ಮೃತಪಟ್ಟವರು ಎಂದು ಹೇಳಲಾಗಿದೆ. ಮಳೆಯಿಂದಾಗಿ ತೇವಗೊಂಡಿದ್ದ ಮನೆಗೋಡೆ ಕುಸಿದು ಗಾಯಗೊಂಡಿದ್ದ ಮೀನಾಕ್ಷಮ್ಮ ಅವರನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆ, 48 ಮನೆಗಳಿಗೆ ಹಾನಿ
ಭಾನುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 14.3 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ 7.5 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 18.5 ಹಿರಿಯೂರು ತಾಲ್ಲೂಕು 25.1 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 13.9 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 25.1 ಮಿ.ಮೀ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 4.2 ಮಿ.ಮೀ ಮಳೆಯಾಗಿದೆ.
ಭಾನುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಾದ್ಯಂತ 48 ಮನೆಗಳು ಭಾಗಶಃ ಹಾನಿಯಾಗಿದ್ದು, 18 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, ಒಂದು ದೊಡ್ಡ ಜಾನುವಾರು ಹಾನಿ ಹಾಗೂ 2 ಹೆಕ್ಟೇರ್ ಕೃಷಿ ಬೆಳೆ ಹಾಗೂ 1 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 6 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ 10 ಮನೆಗಳು ಹಾಗೂ 1 ದೊಡ್ಡ ಜಾನುವಾರು ಹಾನಿ, 12 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ, 1 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 2 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಹೊಳಲ್ಕೆರೆ 18 ಮನೆಗಳು, ಹೊಸದುರ್ಗ 2 ಮನೆಗಳು ಭಾಗಶಃ ಹಾನಿ ಹಾಗೂ 1 ಮನೆಗೆ ನೀರು ನುಗ್ಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 8 ಮನೆಗಳು ಭಾಗಶಃ ಹಾನಿ ಹಾಗೂ 5 ಮನೆಗಳಿಗೆ ನೀರು ನುಗ್ಗಿರುವ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.