ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಓಲೈಕೆಗಾಗಿ ರಾಜಕೀಯ ನಾಯಕರು ಇನ್ನಿಲ್ಲಿದ ಕಸರತ್ತು ನಡೆಸಿದ್ದಾರೆ. ರಾಜಕೀಯ ನಾಯಕರು ಮತದಾರರಿಗೆ ವಿವಿಧ ರೀತಿಯ ಗಿಫ್ಟ್, ಹಣದ ಆಮಿಷಗಳನ್ನು ಒಡ್ದುತ್ತಿದ್ದು, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಚುನಾವಣಾ ಅಕ್ರಮ ಆರೋಪದಡಿ ದೂರು ದಾಖಲಿಸಿದೆ.
ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕರು ಚುನಾವಣಾ ಅಕ್ರಮವೆಸಗಿದ್ದಾರೆ. ಮತದಾರರಿಗೆ ಹಣದ ಆಮಿಷವೊಡ್ಡುತ್ತಿದ್ದಾರೆ. 40% ಕಮಿಷನ್ ಮೂಲಕ ಬಿಜೆಪಿ ನಾಯಕರು ಸಾವಿರಾರು ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಒಂದು ಮತಕ್ಕೆ 6 ಸಾವಿರ ರೂಪಾಯಿ ಕೊಡ್ತೀವಿ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಜಾರಕಿಹೊಳಿ ಆಮಿಷವೊಡ್ದಿರುವ ವಿಡಿಯೋ ಕೂಡ ಇದೆ. ಈ ಸಂಬಂಧ ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದೇವೆ. ಐಪಿಸಿ ಸೆಕ್ಷ 171(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಎಫ್ಐಆರ್ ದಾಖಲಿಸಿಕೊಂಡು ಬಿಜೆಪಿ ನಾಯಕರನ್ನು ಬಂಧಿಸಲಿ ಎಂದು ಆಗ್ರಹಿಸಿದರು.