ಮಂಡ್ಯ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್, ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪ ತೀವ್ರಗೊಂಡಿದ್ದು, ಈ ನಡುವೆ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಶಾಸಕ ಕದಲೂರು ಉದಯ್, ರೇವಣ್ಣ ಪರಿಸ್ಥಿತಿಯೇ ಕುಮಾರಸ್ವಾಮಿಗೂ ಬರಬಹುದು. ಹೆಚ್.ಡಿ.ಕುಮಾರಸ್ವಾಮಿ ಏನೂ ಸಾಚಾ ಅಲ್ಲ. ಅವರೂ ಜೈಲಿಗೆ ಹೋಗುವ ಕಾಲ ಹತ್ತಿರ ಬಂದಿದೆ ಎಂದಿದ್ದಾರೆ.
ಇಷ್ಟು ದಿನ ಯಾರೂ ಬಂದು ದೂರು ಕೊಡುವ ಧೈರ್ಯ ಮಾಡಿಲ್ಲ. ಕುಮಾರಸ್ವಾಮಿ ವಿರುದ್ಧ ಆರೋಪಗಳು ಕೇಳಿಬಂದಿವೆ. ಪೆನ್ ಡ್ರೈವ್ ಪ್ರಕರಣದ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಬಹುದು. ಯಾರಾದರೂ ದೂರು ಕೊಟ್ಟರೆ ಸರ್ಕಾರ ತನಿಖೆ ಮಾಡಲಿದೆ ಎಂದರು.
ಕುಮಾರಸ್ವಾಮಿ ಏನು ಸಾಚಾನಾ? ಮಗಳ ವಯಸ್ಸಿನವರನ್ನು ಪುಸಲಾಯಿಸಿ ಮಗಳು ಹುಟ್ಟಿಸಿ ಬಿಟ್ಟುಬಿಟ್ಟಿದ್ದಾರೆ. ಸಿಎಂ ಆಗಿದ್ದವರು ಇಂತಹ ನೀಚ ಕೆಲಸ ಮಾಡಬಹುದಾ? ಜೀವನದುದ್ದಕ್ಕೂ ಬ್ಲ್ಯಾಕ್ ಮೇಲ್, ಅಪಪ್ರಚಾರ ಮಾಡುತ್ತಾ ಬಂದವರು. ಬೇರೆಯವರನ್ನು ಮುಳುಗಿಸಿದ್ದೇ ಅವರ ಸಾಧನೆ. ಇವರ ಮನೆಯ ಹೆಣ್ಣುಮಕ್ಕಳ ಮರ್ಯಾದೆ ರೋಡ್ ನಲ್ಲಿ ಹರಾಜಾಗಿದ್ದರೆ ಪ್ರತಿಭಟನೆ ಮಾಡ್ತಿದ್ರಾ? ಸ್ವಂತಕ್ಕೆ ಬೇಕಿರುವುದನ್ನು ಮಾತ್ರ ಕುಮಾರಸ್ವಾಮಿ ಮಾಡ್ತಾರೆ ಎಂದು ಕಿಡಿಕಾರಿದರು.