ಬೆಂಗಳೂರು: ನಿಗಮ -ಮಂಡಳಿ ನೇಮಕಾತಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಶಾಸಕರಿಗೆ ಸಿಹಿ ಸುದ್ದಿ ಸಿಕ್ಕಿದೆ.
ಆಗಸ್ಟ್ ಮೊದಲ ವಾರದಲ್ಲಿ ನಿಗಮ ಮಂಡಳಿ ನೇಮಕಾತಿ ನಡೆಯುವ ಸಾಧ್ಯತೆಯಿದ್ದು, ನೇಮಕಾತಿ ಪ್ರಕ್ರಿಯೆ ಸುಳಿವು ಸಿಕ್ಕ ಬೆನ್ನಲ್ಲೇ ರಾಜ್ಯದಾದ್ಯಂತ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ನೇಮಕಾತಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದ್ದು, 70ರಷ್ಟು ಹುದ್ದೆಗಳನ್ನು ಕಾರ್ಯಕರ್ತರಿಗೆ, ಶೇಕಡ 30ರಷ್ಟು ಹುದ್ದೆಗಳನ್ನು ಶಾಸಕರಿಗೆ ನೀಡಲಾಗುವುದು.
ರಾಜ್ಯ ಸರ್ಕಾರದ ವಿವಿಧ ಸಚಿವಾಲಯಗಳ ಅಡಿ 80 ರಿಂದ 90 ನಿಗಮ ಮಂಡಳಿಗಳಿದ್ದು, ಈ ಬಾರಿ ಎರಡೂವರೆ ವರ್ಷಕ್ಕೆ ಮಾತ್ರ ನೇಮಕ ಮಾಡಿ ಮುಂದಿನ ಅವಧಿಗೆ ಬದಲಾವಣೆ ಮಾಡಲಾಗುತ್ತದೆ. ಪಕ್ಷದ ಮುಖಂಡರು, ಶಾಸಕರಿಗೆ ಅವಕಾಶ ನೀಡಲಿದ್ದು, ಪ್ರಮುಖವಾದ 22 ನಿಗಮ ಮಂಡಳಿಗಳಿಗೆ ಶಾಸಕರು ಹಾಗೂ ಪ್ರಮುಖ ಮುಖಂಡರು ತೀವ್ರ ಲಾಬಿ ನಡೆಸಿದ್ದಾರೆ. ಸಚಿವ ಸ್ಥಾನ ವಂಚಿತ ಶಾಸಕರಿಗೆ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡುವ ಸಾಧ್ಯತೆ ಇದೆ.