ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು 144 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
2008 ರ ‘ರಾಮಾಯಣ’ದಲ್ಲಿ ಹನುಮಾನ್ ಪಾತ್ರವನ್ನು ನಿರ್ವಹಿಸಿದ ವಿಕ್ರಮ್ ಮಸ್ತಲ್ ಅವರನ್ನು ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಣಕ್ಕಿಳಿಸಿದೆ. ಇವರಿಬ್ಬರು ಬುಧ್ನಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಈ ಮೂಲಕ ವಿಕ್ರಮ್ ಮಸ್ತಲ್ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಂತಾಗಿದೆ. ಈ ವರ್ಷ ಜುಲೈನಲ್ಲಿ ಮಸ್ತಲ್ ಕಾಂಗ್ರೆಸ್ ಸೇರಿದ್ದರು. ನಟನ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಉಪಸ್ಥಿತರಿದ್ದರು.
ಸಿಎಂ ಚೌಹಾಣ್ ಬುಧ್ನಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ತನ್ನ ನಾಲ್ಕನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಕಟಿಸಿತ್ತು. ಅಕ್ಟೋಬರ್ 9 ರಂದು ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಬುಧ್ನಿ ವಿಧಾನಸಭಾ ಕ್ಷೇತ್ರವು ಶಿವರಾಜ್ ಚೌಹಾಣ್ ಅವರ ಭದ್ರಕೋಟೆಯಾಗಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ, ಚೌಹಾಣ್ ಬುಧ್ನಿ ಸ್ಥಾನವನ್ನು 58,999 ಮತಗಳ ಅಂತರದಿಂದ ಗೆದ್ದರು, ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅರುಣ್ ಯಾದವ್ ಅವರನ್ನು ಸೋಲಿಸಿದರು.
ಮಧ್ಯಪ್ರದೇಶದ ಕಾಂಗ್ರೆಸ್‌ನ ಇತರ ಅಭ್ಯರ್ಥಿಗಳ ಪೈಕಿ ರಾಜ್ಯ ಪಕ್ಷದ ಮುಖ್ಯಸ್ಥ ಕಮಲ್‌ನಾಥ್ ಅವರು ಛಿಂದ್‌ವಾರಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ರಘೋಘರ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಪ್ರಸ್ತುತ ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.