ಪುಣೆಯ ಪಿಂಪ್ರಿ ಚಿಂಚ್ವಾಡ್ನಲ್ಲಿರುವ ಪ್ರಮುಖ ಆಟೋಮೊಬೈಲ್ ಸಂಸ್ಥೆಗೆ ಸರಬರಾಜು ಮಾಡಲಾದ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಪತ್ತೆಯಾದ ನಂತರ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಸಮೋಸಗಳನ್ನು ಸರಬರಾಜು ಮಾಡಲು ತಿಳಿಸಿದ್ದ ಉಪಗುತ್ತಿಗೆ ಸಂಸ್ಥೆಯ ಇಬ್ಬರು ಕಾರ್ಮಿಕರು ಮತ್ತು ಕಲಬೆರಕೆಗಾಗಿ ಹಿಂದೆ ತೆಗೆದು ಹಾಕಲಾದ ಮತ್ತೊಂದು ಸಂಸ್ಥೆಯ ಮೂವರು ಪಾಲುದಾರರ ವಿರುದ್ಧ ಕೇಸ್ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕ್ಯಾಟಲಿಸ್ಟ್ ಸರ್ವೀಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಆಟೋಮೊಬೈಲ್ ಸಂಸ್ಥೆಯ ಕ್ಯಾಂಟೀನ್ಗೆ ಆಹಾರ ಪದಾರ್ಥಗಳನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಸಂಸ್ಥೆಯು ಮನೋಹರ್ ಎಂಟರ್ಪ್ರೈಸಸ್ ಎಂಬ ಮತ್ತೊಂದು ಉಪಗುತ್ತಿಗೆ ಸಂಸ್ಥೆಗೆ ಸಮೋಸ ಪೂರೈಕೆಗೆ ಗುತ್ತಿಗೆಯನ್ನು ನೀಡಿತ್ತು. ಶನಿವಾರ, ಆಟೋಮೊಬೈಲ್ ಸಂಸ್ಥೆಯ ಕೆಲವು ಉದ್ಯೋಗಿಗಳಿಗೆ ಸಮೋಸಾಗಳಲ್ಲಿ ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ.
ಘಟನೆಯ ಕುರಿತು ಮನೋಹರ್ ಎಂಟರ್ಪ್ರೈಸಸ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಫಿರೋಜ್ ಶೇಖ್ ಮತ್ತು ವಿಕ್ಕಿ ಶೇಖ್ ಎಂದು ಗುರುತಿಸಲಾದ ಇಬ್ಬರು ಕಾರ್ಮಿಕರು ಕಾಂಡೋಮ್, ಗುಟ್ಕಾ ಮತ್ತು ಕಲ್ಲುಗಳನ್ನು ಸಮೋಸಗಳಲ್ಲಿ ತುಂಬಿದ್ದರು ಎಂದು ಚಿಖ್ಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.