ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಲ್ಲಿ ಖಾಲಿ ಇರುವ 2500 ನಿರ್ವಾಹಕರ ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 1 ರಂದು ರಾಜ್ಯದ ಆರು ಜಿಲ್ಲೆಗಳ 50 ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈಗಾಗಲೇ ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು 2500 ಹುದ್ದೆಗಳಿಗೆ 23 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರು, ಬಳ್ಳಾರಿ, ಧಾರವಾಡ, ಕಲಬುರಗಿ, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ಕಂಡಕ್ಟರ್ ಹುದ್ದೆಗಳ ನೇಮಕಾತಿಗೆ ಸೆಪ್ಟೆಂಬರ್ 1 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಸೆಪ್ಟೆಂಬರ್ 1ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಮೊದಲ ಪತ್ರಿಕೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಎರಡನೇ ಪತ್ರಿಕೆಯ ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು ಕೇಂದ್ರದೊಳಗೆ ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರಬಾರದು ಮತ್ತು ಪರೀಕ್ಷಾ ನಿಯಮಾವಳಿ ರೀತ್ಯ ನಡೆದುಕೊಳ್ಳಬೇಕು. ಕೇಂದ್ರದೊಳಗೆ ಅಭ್ಯರ್ಥಿಗಳನ್ನು ತಪಾಸಣೆ ಮಾಡಿ ಬಿಡಬೇಕಾಗಿರುವುದರಿಂದ ಸಾಕಷ್ಟು ಮುಂಚಿತವಾಗಿ ಕೇಂದ್ರದಲ್ಲಿರಬೇಕಾಗುತ್ತದೆ.
ಕೆಇಎ ಯಿಂದ ಇತರೆ ಜಿಲ್ಲೆಗಳಿಂದ ಪರೀಕ್ಷಾ ಮೇಲ್ವಿಚಾರಕರನ್ನು ನೇಮಕ ಮಾಡಲಿದ್ದು, ಜಿಲ್ಲಾ ಮಟ್ಟದಲ್ಲಿ ಪ್ರತಿ ಕೇಂದ್ರಕೆ ಒಬ್ಬರಂತೆ ನೇಮಕ ಮಾಡಲಾಗುತ್ತದೆ ಎಂದ ಅವರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸುವ ಮೂಲಕ ಯಾವುದೇ ಪರೀಕ್ಷಾ ಅವ್ಯವಹಾರಗಳಿಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.
144 ಸೆಕ್ಷನ್ ಜಾರಿ;
ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತ 144 ಸೆಕ್ಷನ್ ಜಾರಿಗೊಳಿಸಿ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ವೇಳೆ ಅಲ್ಲಿ ಯಾವುದೇ ಜೆರಾಕ್ಸ್ ಅಂಗಡಿ, ಇಂಟರ್‍ನೆಟ್ ಸೆಂಟರ್ ಗಳನ್ನು ತೆರೆಯುವಂತಿಲ್ಲ.