
ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಪರೀತ ಚಳಿ ಹಾಗೂ ಶೀತಗಾಳಿ 25 ಜನರನ್ನು ಬಲಿ ಪಡೆದಿದೆ. ಚಳಿ ತಾಳಲಾರದೇ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ನಿಂದ ಇವರು ಸಾವನ್ನಪ್ಪಿದ್ದಾರೆ. 17 ಮಂದಿ ವೈದ್ಯಕೀಯ ನೆರವು ನೀಡುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದಾರೆ.
ಶೀತದಿಂದಾಗಿ ರಕ್ತ ಹೆಪ್ಪುಗಟ್ಟುತ್ತಿದ್ದು, ರಕ್ತದೊತ್ತಡದ ಹಠಾತ್ ಹೆಚ್ಚಳವು ಹೃದಯಾಘಾತ ಮತ್ತು ಮೆದುಳಿನ ಸ್ಟ್ರೋಕ್‌ಗೆ ಕಾರಣವಾಗುತ್ತಿದೆ ಅಂತಾ ವೈದ್ಯರು ತಿಳಿಸಿದ್ದಾರೆ.
ಶೀತ ವಾತಾವರಣದಲ್ಲಿ ಹೃದಯಾಘಾತವಾಗೋದು ಕೇವಲ ವಯಸ್ಸಾದವರಿಗೆ ಮಾತ್ರವಲ್ಲ, ಹದಿಹರೆಯದವರಿಗೆ ಕೂಡ ಇದು ಅಪಾಯಕಾರಿ. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ಬೆಚ್ಚಗಿರಬೇಕು ಮತ್ತು ಸಾಧ್ಯವಾದಷ್ಟು ಮನೆಯೊಳಗೆ ಇರುವುದು ಉತ್ತಮ. ಚಳಿಯ ತೀವ್ರತೆಯಿಂದಾಗಿ ಅನೇಕರಲ್ಲಿ ಹೃದಯದ ಸಮಸ್ಯೆ ಕಾಣಿಸಿಕೊಂಡಿದ್ದು, 700ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದೌಡಾಯಿಸಿದ್ದರು. ಈ ಪೈಕಿ 41 ಜನರ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಹೃದ್ರೋಗಿಗಳು ಚಳಿಯಿಂದ ಸಾವನ್ನಪ್ಪಿದ್ದಾರೆ.
ಉತ್ತರ ಭಾರತದಾದ್ಯಂತ ಶೀತಗಾಳಿ ಮಾರಣಾಂತಿಕವಾಗಿ ಪರಿಣಮಿಸಿದೆ. ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ತೀವ್ರವಾದ ಚಳಿ ಮತ್ತು ದಟ್ಟ ಮಂಜಿನಿಂದ ಜನಜೀವನವೇ ಅಸ್ತವ್ಯಸ್ಥವಾಗಿದೆ. ರೈಲು ಸಂಚಾರ ಹಾಗೂ ವಿಮಾನಗಳ ಹಾರಾಟಕ್ಕೂ ಅಡ್ಡಿಯಾಗ್ತಿದೆ. ದೆಹಲಿಯು ಕನಿಷ್ಠ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದೆರಡು ವರ್ಷಗಳಲ್ಲಿ ಜನವರಿ ತಿಂಗಳಿನಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಇದು.
ರಾಷ್ಟ್ರರಾಜಧಾನಿಯೀಗ ಗಿರಿಧಾಮಗಳಿಗಿಂತಲೂ ತಂಪಾಗಿದೆ. ಕೊರೆಯುವ ಚಳಿಯಲ್ಲಿ ಜನರು ತತ್ತರಿಸಿದ್ದಾರೆ. ದೆಹಲಿ-ಎನ್‌ಸಿಆರ್ ಸೇರಿದಂತೆ ಬಯಲು ಪ್ರದೇಶಗಳ ಮೂಲಕ ಹಿಮದಿಂದ ಆವೃತವಾದ ಗಾಳಿ ಬೀಸುತ್ತಿದ್ದು, ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಜನರು ಚಳಿ ತಡೆಯಲಾಗದೇ ಹೀಟರ್‌ಗಳು ಮತ್ತು ಬಿಸಿ ಬಿಸಿ ಪಾನೀಯಗಳ ಮೊರೆಹೋಗುತ್ತಿದ್ದಾರೆ.