ತೆಂಗಿನಕಾಯಿಯನ್ನು ಪ್ರಪಂಚದಾದ್ಯಂತ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಅದರ ಪ್ರತಿಯೊಂದು ಭಾಗವೂ ಪ್ರಯೋಜನಕಾರಿ. ತೆಂಗಿನಕಾಯಿಯನ್ನು ನಾವು ಹಲವು ವಿಧಗಳಲ್ಲಿ ಬಳಸುತ್ತೇವೆ. ಇದರ ತಿರುಳು, ನೀರು, ಚಿಪ್ಪು ಮತ್ತು ಸಿಪ್ಪೆಗಳು ಸಹ ಬಹಳ ಉಪಯುಕ್ತವಾಗಿವೆ. ತೆಂಗಿನ ಹಾಲನ್ನು ಬಳಸಿ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
ಆದರೆ ತೆಂಗಿನಕಾಯಿ ವಿನೆಗರ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ತೆಂಗಿನಕಾಯಿ ವಿನೆಗರ್ ಅನ್ನು ಕೇರಳ ಮತ್ತು ಗೋವಾದ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ, ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದರ ರುಚಿ ಆಪಲ್ ಸೈಡರ್ ವಿನೆಗರ್ಗಿಂತ ಸ್ವಲ್ಪ ಸೌಮ್ಯವಾಗಿರುತ್ತದೆ.
ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ – ಮಧುಮೇಹ ರೋಗಿಗಳು ತೆಂಗಿನಕಾಯಿ ವಿನೆಗರ್ ಅನ್ನು ಸೇವಿಸಬೇಕು. ಏಕೆಂದರೆ ಇದು ಅಸಿಟಿಕ್ ಆಮ್ಲವನ್ನು ಹೊಂದಿರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಹೆಚ್ಚಿನ ಕಾರ್ಬ್ ಊಟದ ನಂತರ ತೆಂಗಿನಕಾಯಿ ವಿನೆಗರ್ ಅನ್ನು ಸೇವಿಸಬಹುದು.
ಹೊಟ್ಟೆ ಮತ್ತು ಸೊಂಟದ ಕೊಬ್ಬು ಇಳಿಕೆ – ತೂಕ ಕಡಿಮೆ ಮಾಡಿಕೊಳ್ಳಲು ಆಪಲ್ ಸೈಡರ್ ವಿನೆಗರ್ ಅನ್ನು ಅನೇಕರು ಬಳಸುತ್ತಾರೆ. ತೆಂಗಿನಕಾಯಿ ವಿನೆಗರ್ ಕೂಡ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ತೆಂಗಿನಕಾಯಿ ವಿನೆಗರ್ ಅನ್ನು ನಿಯಮಿತವಾಗಿ ಸೇವಿಸಿದರೆ ದೀರ್ಘಕಾಲದವರೆಗೆ ಹಸಿವಾಗುವುದಿಲ್ಲ. ಅತಿಯಾಗಿ ತಿನ್ನುವುದರಿಂದ ತಪ್ಪಿಸಿಕೊಳ್ಳಬಹುದು. ಈ ರೀತಿಯಾಗಿ ಕ್ರಮೇಣ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ – ತೆಂಗಿನಕಾಯಿ ವಿನೆಗರ್ ಅನ್ನು ತಯಾರಿಸುವ ಮೊದಲು ಹುದುಗುವಿಕೆಯ ಪ್ರಕ್ರಿಯೆ ನಡೆಸಲಾಗುತ್ತದೆ. ನಂತರ ಸಿದ್ಧಪಡಿಸಿದ ಅಂತಿಮ ಉತ್ಪನ್ನವು ಹೊಟ್ಟೆ ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸುವ ಪ್ರೋಬಯಾಟಿಕ್ಗಳ ಸಮೃದ್ಧ ಪ್ರಮಾಣವನ್ನು ಹೊಂದಿರುತ್ತದೆ. ಇದನ್ನು ಸೇವನೆ ಮಾಡಿದ್ರೆ ಮಲಬದ್ಧತೆಯಿಂದ ಪರಿಹಾರ ಪಡೆಯಬಹುದು. ಗ್ಯಾಸ್ಟ್ರಿಕ್ ಮತ್ತು ಅಸಿಡಿಟಿಗೂ ಇದು ಪರಿಣಾಮಕಾರಿ ಮದ್ದು.
ರೋಗನಿರೋಧಕ ಶಕ್ತಿ ಹೆಚ್ಚಳ – ತೆಂಗಿನಕಾಯಿ ವಿನೆಗರ್ ಅನ್ನು ನಿಯಮಿತವಾಗಿ ಸೇವಿಸಿದರೆ ದೇಹದ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿದಾಗ ಶೀತ, ಕೆಮ್ಮು, ಜ್ವರದಂತಹ ವೈರಲ್ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು – ತೆಂಗಿನಕಾಯಿ ವಿನೆಗರ್ ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಪೋಷಕಾಂಶ. ಬಿಪಿಯನ್ನು ನಿಯಂತ್ರಿಸಿದಾಗ ಹೃದಯಾಘಾತ ಮತ್ತು ಹೃದಯ ವೈಫಲ್ಯದಂತಹ ಸಮಸ್ಯೆಗಳಾಗುವುದಿಲ್ಲ.