ಮೈಸೂರು : ಡಿಪ್ಲೋಮಾ, ಪದವೀಧರರಿಗೆ ಸಿಎಂ ಸಿದ್ದರಾಮಯ್ಯ ಸಿಹಿಸುದ್ದಿ ನೀಡಿದ್ದು, ಜನವರಿಯಲ್ಲಿ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿಯನ್ನು ಜಾರಿಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಯಂತೆ ನಾಲ್ಕನೇ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದ್ದು, ಜನವರಿ ವೇಳೆಗೆ ಯುವನಿಧಿ ಯೋಜನೆಯನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳ ವರೆಗೆ ಉದ್ಯೋಗ ಸಿಗದ ಎಲ್ಲಾ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ಯೆ ನೀಡುವ ಮೂಲಕ ನಿರುದ್ಯೋಗದ ಹತಾಶ ಹಾಗೂ ಅಸಹಾಯಕ ಪರಿಸ್ಥಿತಿಯಿಂದ ಹೊರತಂದು, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಹುಡುಕಿಕೊಳ್ಳಲು ಇನ್ನಷ್ಟು ಸಮಯಾವಕಾಶ ಕಲ್ಪಿಸಿಕೊಡುತ್ತಿದ್ದೇವೆಎಂದರು.
ನಮ್ಮ ಕಾರ್ಯಕ್ರಮಗಳ ಜಾರಿಯಿಂದ ರಾಜ್ಯ ದಿವಾಳಿಯಾಗಲಿಲ್ಲ. ಇದರಿಂದ ಬಡವ-ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ಈಗ ಮೋದಿ ಅವರ ಮಾತು ಪರಮ ಸುಳ್ಳು ಎನ್ನುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.