ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಕಡೆ ಮನೆಗಳು, ರಸ್ತೆ ಕುಸಿದು ಜನ ಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ಜುಲೈ 31ರಿಂದ ರಾಜ್ಯದ ಮಳೆಪೀಡಿತ ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸೋಮವಾರ ಮಂಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದ್ದು, ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಜನರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಲಾಗುವುದು. ಸಚಿವ ಕೃಷ್ಣ ಬೈರೇಗೌಡರು ನಿನ್ನೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದಾರೆ ಎಂದರು.
ಎಲ್ಲೆಡೆ ಮಳೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಟ್ಯಾಂಕರ್ ನೀರಿನ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈಗ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ ಎಂದರು. ಮಳೆಯಿಂದಾಗಿ ಕೈ ಮೀರಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಕೆ.ಆರ್.ಎಸ್ , ಕಬಿನಿ, ಹಾರಂಗಿ, ಹೇಮಾವತಿ, ಆಲಮಟ್ಟಿ, ಸೇರಿದಂತೆ ಎಲ್ಲಾ ಜಲಾಶಯಗಳಿಗೆ ನೀರು ಬರುತ್ತಿರುವುದು ರೈತರಿಗೆ ಹಾಗೂ ಸರ್ಕಾರಕ್ಕೆ ಸಂತೋಷ ತಂದಿದೆ. ಹಾವೇರಿಯಲ್ಲಿ 87% ಬಿತ್ತನೆಯಾಗಿದೆ ಎಂದರು.