
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿ, ಬರ ಪರಿಸ್ಥಿತಿಯಿಂದ ಎದುರಾದ ಸಮಸ್ಯೆಗಳು ಸೇರಿ ಸರ್ಕಾರದ ಕಾರ್ಯಕ್ರಮಗಳ ಅನುಷ್ಟಾನದ ಪ್ರಗತಿ ಪರಿಶೀಲಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ನೀಡಿದ ಸಲಹೆ ಸೂಚನೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ನಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಜಾತ್ಯತೀತತೆ ಮತ್ತು ಸಂವಿಧಾನಕ್ಕೆ ಬದ್ಧರಾಗಿರಬೇಕು. ಇಲ್ಲದಿದ್ದರೆ ಅಂಥವರಿಗೆ ಇಲ್ಲಿ ಮುಂದುವರೆಯಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಬಂದು 8 ತಿಂಗಳುಗಳಾಗಿದೆ. DC, CEO ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿ 3-4 ತಿಂಗಳುಗಳಾಗಿವೆ. ನಿಮ್ಮ ಅನುಭವ ಜಿಲ್ಲಾಡಳಿತಕ್ಕೆ ನೆರವಾಗಬೇಕು. ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಲು, ಜಿಲ್ಲಾ ಮಟ್ಟದ ಅಧಿಕಾರಿಗಳು ಕ್ಷಿಪ್ರ ತೀರ್ಮಾನ ತೆಗೆದುಕೊಳ್ಳಲು ನೆರವಾಗಬೇಕು ಎನ್ನುವ ಕಾರಣಕ್ಕೆ ನಿಮ್ಮನ್ನು ನೇಮಿಸಲಾಗಿದೆ. ನೀವು ಉಸ್ತುವಾರಿ ವಹಿಸಿದ ಮೇಲೆ ಆಡಳಿತಾತ್ಮಕವಾಗಿ ಏನು ಬದಲಾವಣೆ ಆಗಿದೆ ಎನ್ನುವ ಮಾಹಿತಿಗಳನ್ನು ಸಭೆಗೆ ನೀಡಬೇಕು ಎಂದು ಸೂಚಿಸಿದ್ದಾರೆ.
ನಮ್ಮ ಗ್ಯಾರಂಟಿ ಯೋಜನೆಗಳು ಬಹುಪಾಲು ಜನರಿಗೆ ತಲುಪಿದೆ. ತಾಂತ್ರಿಕ ಅಡಚಣೆಗಳಿಂದಾಗಿ ಕೆಲವರಿಗೆ ತಲುಪಿಲ್ಲ. ಇದನ್ನೆ ದೊಡ್ಡ ಲೋಪವೆಂಬಂತೆ ಕೆಲವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಮೌನವಾಗಿದ್ದಾರೆ. ತಾಂತ್ರಿಕ ಸಮಸ್ಯೆ ಬಗೆಹರಿಸಲು ಯಾಕೆ ಇನ್ನೂ ಸಾಧ್ಯವಾಗಿಲ್ಲ? ಮೊದಲು ಆ ಸಮಸ್ಯೆಯನ್ನು ಪರಿಹರಿಸಿ. ಅನರ್ಹ ಫಲಾನುಭವಿಗಳಿಗೆ ಮಾಹಿತಿ ನೀಡಿ ಅವರ ಅರ್ಜಿ ತಿರಸ್ಕರಿಸಿ ಎಂದು ಹೇಳಿದ್ದಾರೆ.
ಸಾರ್ವಜನಿಕರು ರೆವಿನ್ಯೂ ಇಲಾಖೆ, ತಹಶೀಲ್ದಾರ್ ಮತ್ತು AC ಹಾಗೂ DC ಕಚೇರಿಗಳಿಗೆ ಅಲೆದಾಟ ಕಡಿಮೆ ಆಗಿದೆಯಾ? ತಹಶೀಲ್ದಾರ್, AC, DC ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗ್ತಾ ಇದೆಯಾ? ಜನರ ಅರ್ಜಿಗಳು ಎಷ್ಟು ದಿನಗಳಿಂದ ಬಾಕಿ ಇವೆ ಪರಿಶೀಲನೆ ನಡೆಸಿದ್ದೀರಾ? ಎಷ್ಟು ಬಾಕಿ ಅರ್ಜಿ ನಿಮ್ಮಿ೦ದ ಬಗೆಹರಿದಿದೆ? ಎಷ್ಟು ಆಸ್ಪತ್ರೆಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಿ? ಡಯಾಲಿಸಿಸ್ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಜನರಿಗೆ ಸಿಗುತ್ತಿದೆಯಾ? ಜನ ಹೆಚ್ಚು ಹೋಗೋದು ಕೃಷಿ, ಕಂದಾಯ, ಪೊಲೀಸ್ ಠಾಣೆಗಳಿಗೆ. ನೀವು ಎಷ್ಟು ಠಾಣೆಗಳಿಗೆ ಭೇಟಿ ನೀಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಪ್ರತಿ ಜಿಲ್ಲೆಯ ಪ್ರಗತಿ ಪರಿಶೀಲನೆಯನ್ನು ಸವಿವರವಾಗಿ ಮಾಡಬೇಕು. ಅದರಿಂದ ಜಿಲ್ಲೆಯ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಯಾ ಜಿಲ್ಲೆಯ ರಸ್ತೆ ಸಾರಿಗೆ ನಿಗಮದ ಡಿ.ಸಿ ಗಳೊಂದಿಗೆ ಸಭೆ ನಡೆಸಿ, ಬಸ್ ಗಳ ಕೊರತೆ, ಸ್ಥಗಿತಗೊಳಿಸಿರುವ ಮಾರ್ಗಗಳು, ಬಸ್ ಸೇವೆಯಲ್ಲಿನ ವ್ಯತ್ಯಯ ಮೊದಲಾದ ವಿಷಯಗಳ ಕುರಿತು ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ತಿಳಿಸಿದ್ದಾರೆ.
ವನ್ಯಪ್ರಾಣಿಗಳು ರೈತರ ಜಮೀನಿಗೆ, ತೋಟಕ್ಕೆ ನುಗ್ಗಲು ಆಹಾರ, ನೀರಿನ ಕೊರತೆಯೇ ಕಾರಣ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅರಣ್ಯದೊಳಗೆಯೇ ಆಹಾರ, ನೀರಿನ ವ್ಯವಸ್ಥೆ ಕಲ್ಪಿಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಮೇವು ಸಾಲದೆ ಇದ್ದರೆ, ಬೆಳೆಯಬೇಕು. ರೈತರಿಂದ ಕೊಂಡುಕೊಳ್ಳಬೇಕು. ಮೇವಿಗೆ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಮೇವು ಮಿನಿಕಿಟ್ ವಿತರಣೆ ಕುರಿತು ಸ೦ಚಿವ ಸ೦ಪುಟದ ಮು೦ದೆ ಪ್ರಸ್ತಾವನೆ ಸಲ್ಲಿಸಬೇಕು. ಮೇವಿನ ಲಭ್ಯತೆಯನ್ನು ವಾಸ್ತವಾಂಶವನ್ನು ಆಧರಿಸಿ ಲೆಕ್ಕಾಚಾರ ಹಾಕಬೇಕು. ಮುಂದೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿ೦ಗಳಿನಲ್ಲಿ ಸಮಸ್ಯೆ ಎದುರಾಗಬಹುದು. ಇದಕ್ಕೆ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಅಧಿವೇಶನದಲ್ಲಿ ಬರುವ ಪ್ರಶ್ನೆಗಳಿಗೆ ಉತ್ತರ ಒದಗಿಸಲೇಬೇಕು. ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಸಮಯ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಉತ್ತರ ನೀಡದಿರುವುದು, ಸಮಯ ತೆಗೆದುಕೊಳ್ಳುವುದು ಮಾಡಬಾರದು. ಅಧಿವೇಶನದ ಸಂದರ್ಭದಲ್ಲಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಜರಿರಬೇಕು. ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬ ಖಾತ್ರಿ ಜನರಲ್ಲಿ ಮೂಡುತ್ತದೆ ಎಂದಿದ್ದಾರೆ.
ರೇಷ್ಮೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆಯ ಫಾರಂಗಳಲ್ಲಿ ಮೇವು ಬೆಳೆಯಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು, ಮೇವಿಗಾಗಿ ಜನರು ಗುಳೆ ಹೋಗದಂತೆ ನೋಡಿಕೊಳ್ಳುವುದು ಹಾಗೂ ಇನ್‌ಪುಟ್ ಸಬ್ಸಿಡಿ ವಿತರಣೆ – ಈ ನಾಲ್ಕು ಅಂಶಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದ್ದಾರೆ.
ಪ್ರತಿಯೊಬ್ಬ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಡೈರಿ ಇಟ್ಟುಕೊಳ್ಳಬೇಕು ನಮ್ಮ ಕೆಲಸ -ಕಾರ್ಯಗಳ ವಿವರ ಆ ಡೈರಿಯಲ್ಲಿರಬೇಕು. ತಿಂಗಳಿಗೆ ಕನಿಷ್ಠ ಎರಡು ಬಾರಿಯಾದರೂ ತಮ್ಮ ತಮ್ಮ ಉಸ್ತುವಾರಿಯ ಜಿಲ್ಲೆಗಳಿಗೆ ಭೇಟಿ ನೀಡುವುದು ಕಡ್ಡಾಯ ಮಾಡಿಕೊಳ್ಳಬೇಕು.
ಮು೦ದಿನ ತಿ೦ಗಳುಗಳಲ್ಲಿ ಬರಗಾಲ ತೀವ್ರವಾಗುವ ಸಾಧ್ಯತೆ ಇದೆ. ಆಗ ಬರಗಾಲದ ಸಮಸ್ಯೆ ಜನರಿಗೆ ತಟ್ಟದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳದ್ದಾಗಿರುತ್ತದೆ. ಪ್ರತಿಯೊಬ್ಬರಿಗೂ ಕುಡಿಯುವ ನೀರು, ಉದ್ಯೋಗ, ಮೇವು ಲಭ್ಯತೆ ಖಾತರಿಪಡಿಸಬೇಕು. ಒಂದು ವಾರದೊಳಗೆ ಇನ್‌ಪುಟ್ ಸಬ್ಸಿಡಿ ಪಾವತಿ ಪೂರ್ಣಗೊಳಿಸಬೇಕು. ಫೆಬ್ರುವರಿ 8 ರಂದು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಜನಸ್ಪಂದನ ಕಾರ್ಯಕ್ರಮದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.