ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಶಾಸಕರು ಅಸಮಾಧಾನ ಹೊರ ಹಾಕಿದ್ದ ವೇಳೆ ನೀಡಿದ್ದ ಭರವಸೆಯಂತೆ ಶಾಸಕರ ಸಿಟ್ಟು ತಣಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.
ಸಿ.ಎಲ್.ಪಿ. ಸಭೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಶಾಸಕರ ಸಭೆ ನಡೆಸಲಾಗುವುದು. ವರ್ಗಾವಣೆ ಶಿಫಾರಸು, ಅನುದಾನ ವಿಚಾರದಲ್ಲಿ ಸಚಿವರು ಸ್ಪಂದಿಸುತ್ತಿಲ್ಲ ಎಂದು ಕೆಲ ಶಾಸಕರು ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತಾಗಿ ಸಿಎಲ್ಪಿ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದ್ದು, ಸಭೆಯಲ್ಲಿ ನೀಡಿದ ಭರವಸೆಯಂತೆ ಸಿಎಂ ಸಿದ್ದರಾಮಯ್ಯ ಸೋಮವಾರದಿಂದ ಜಿಲ್ಲಾವಾರು ಶಾಸಕರ ಸಭೆ ಆರಂಭಿಸಲಿದ್ದಾರೆ. ಮೊದಲ ದಿನ ತುಮಕೂರು, ಯಾದಗಿರಿ, ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿ, ಧಾರವಾಡ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗುವುದು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಭೆಯಲ್ಲಿ ಶಾಸಕರು ಹಾಗೂ ಉಸ್ತುವಾರಿ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಶಾಸಕರ ಬೇಡಿಕೆ ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.