ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜೂನ್ 11 ರಂದು ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಅಂದು ಬೆಳಿಗ್ಗೆ ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಹೊರಡುವ ಬಿಎಂಟಿಸಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡುವರು. ಮಹತ್ವಕಾಂಕ್ಷೆ ಯೋಜನೆಗೆ ವಿಶಿಷ್ಟ ರೀತಿಯಲ್ಲಿ ಸಿಎಂ ಚಾಲನೆ ನೀಡಲಿದ್ದು, ನಂತರ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ.
ಶಕ್ತಿ ಯೋಜನೆ ಅಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಜೂನ್ 11ರಂದು ಮಧ್ಯಾಹ್ನ 1 ಗಂಟೆಯಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿದೆ. ನಿಗಮದ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ತಮ್ಮ ಮೂಲ ದಾಖಲಾತಿಗಳನ್ನು ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಮೂಲ ದಾಖಲಾತಿಗಳ ವಿವರ:
ಆಧಾರ್ ಕಾರ್ಡ, ಚುನಾವಣಾ ಆಯೋಗ ವಿತರಿಸಿರುವ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು, ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು (ಪಿ.ಎಸ್.ಯು.ಎಸ್) ವಿತರಿಸಿರುವ ಗುರುತಿನ ಚೀಟಿ ಅಥವಾ ವಾಸಸ್ಥಳ ನಮೂದಿಸಿರುವಂತಹ ಕರ್ನಾಟಕ ಸರ್ಕಾರದ ಇಲಾಖೆಗಳು, ಕರ್ನಾಟಕ ಸರ್ಕಾರದ ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ ಅಥವಾ ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರೀಕ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ. ಈ ಎಲ್ಲಾ ಗುರುತಿನ ಚೀಟಿಗಳಲ್ಲಿ ಯಾವುದಾದರು ಒಂದನ್ನು ತೋರಿಸಿ “ಶೂನ್ಯ ಮೊತ್ತದ ಟಿಕೆಟ್’’ ಪಡೆದು ಮಹಿಳೆಯರು ಜೂನ್ 11ರ ಮಧ್ಯಾಹ್ನ 1 ಗಂಟೆಯಿಂದ ಉಚಿತ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.