ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಸಿಎಂ ಕುರ್ಚಿ ವಿಚಾರ: ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಎಐಸಿಸಿ ಅಧ್ಯಕ್ಷರಿಗೆ ಪತ್ರ

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿ ವಿಚಾರ ತಾರಕಕ್ಕೇರಿದ್ದು, ಮುಖ್ಯಮಂತ್ರಿ ಆಸೆ ಬಹಿರಂಗವಾಗಿ ವ್ಯಕ್ತಪಡಿಸುತ್ತಿರುವವರಿಗೆ ಬ್ರೇಕ್ ಹಾಕುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ವಿಧಾನ ಪರಿಷತ್ ಸದಸ್ಯರು ಪತ್ರ ಬರೆದಿದ್ದಾರೆ.

ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ದಿನೇಶ್ ಗೂಳಿಗೌಡ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸುಧೀರ್ಘ ಪತ್ರ ಬರೆದಿದ್ದು, ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಆಗುತ್ತಿರುವ ಹಾನಿಯ ಕುರಿತಾಗಿ ಪ್ರಸ್ತಾಪಿಸಿದ್ದಾರೆ.

ಕಳೆದ 34 ವರ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚು ಮತಗಳನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಳಿಸಿ ದಾಖಲೆ ಬರೆದು 135 ಸ್ಥಾನ ಪಡೆದು ಸರ್ಕಾರ ರಚಿಸಿದೆ. 1989ರ ನಂತರ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಲಭಿಸದ ಅತಿ ದೊಡ್ಡ ಗೆಲುವು ಕಾಂಗ್ರೆಸ್ ಗೆ ಲಭಿಸಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಗಮನ ಸೆಳೆಯುವ ಸಾಧನೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ.

ಮುಖ್ಯಮಂತ್ರಿ ಸೇರಿದಂತೆ ಮಹತ್ವದ ಸ್ಥಾನಗಳ ವಿಚಾರ ಹೈಕಮಾಂಡ್ ಮಟ್ಟದಲ್ಲಿ ನಿರ್ಧಾರವಾಗುತ್ತದೆ. ಅದು ಆ ರೀತಿ ಇರುವಾಗ ಪಕ್ಷದ ಕೆಲವು ಹಿರಿಯ ಸಚಿವರು ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಸರ್ಕಾರದ ಭಾಗವಾಗಿರುವ ಸಚಿವರ ಈ ರೀತಿಯ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ, ಸರ್ಕಾರದ ಭದ್ರತೆ ಬಗ್ಗೆ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಇಂತಹ ಚರ್ಚೆಗಳಿಗೆ ತಕ್ಷಣವೇ ತಡೆ ಹಾಕಬೇಕೆಂದು ಮನವಿ ಮಾಡಿದ್ದಾರೆ.

ಸಚಿವರಾದವರು ತಮ್ಮ ಇಲಾಖೆಗೆ ನೀಡಿದ ಅನುದಾನ ಸದ್ಬಳಕೆ, ಜನರಿಗೆ ಅನುಕೂಲವಾಗುವ ಕಾರ್ಯಕ್ರಮ ಜಾರಿ ಮಾಡುವುದರ ಬಗ್ಗೆ, ಜನರ ಸಮಸ್ಯೆ ನಿವಾರಿಸುವ ಬಗ್ಗೆ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡು ತಿರುಗಾಡುವುದು ತಪ್ಪು. ಅಂತವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read