ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತ ಫಲಾನುಭವಿಗಳಿಗೆ ಇಂದು ರಾಜ್ಯ ಸರ್ಕಾರದ ಎರಡನೇ ಕಂತು ಜಮಾ ಮಾಡಲಾಗುತ್ತದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ 2022 -23ನೇ ಸಾಲಿನ ಎರಡನೇ ಕಂತಿನ ಆರ್ಥಿಕ ನೆರವು 975 ಕೋಟಿ ರೂ. ಮೊತ್ತವನ್ನು 48,75,000 ರೈತರ ಖಾತೆಗಳಿಗೆ ಬಿಡುಗಡೆ ಮಾಡಲಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಹಣ ಜಮಾ ಮಾಡಲಾಗುತ್ತದೆ. ಪಿಎಂ ಕಿಸಾನ್ ನಿಧಿ ಭಾರತದಲ್ಲಿರುವ ಭೂಹಿಡುವಳಿ ಹೊಂದಿದ ರೈತರ ಆದಾಯ ಬೆಂಬಲಿಸುವ ಯೋಜನೆಯಾಗಿದ್ದು, ಕೇಂದ್ರ ಸರ್ಕಾರದ 3 ಕಂತುಗಳಲ್ಲಿ 6000 ರೂ. ಜೊತೆಯಲ್ಲಿ ರಾಜ್ಯ ಸರ್ಕಾರ 4000 ರೂ. ಸಹಾಯಧನವನ್ನು ಎರಡು ಕಂತುಗಳಲ್ಲಿ ಸೇರಿಸಿ ಒಟ್ಟು 10,000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತದೆ.