ಬೆಂಗಳೂರು: ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಚಿಂತನೆ ನಡೆಸಿದೆ. ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎರಡು ಮೂರು ದಿನಗಳಲ್ಲಿ ಮೋಡ ಬಿತ್ತನೆ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಎರಡು ದಿನಗಳಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತ ಮಳೆಯಾಗಿದ್ದು, ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಮೋಡ ಬಿತ್ತನೆಯಿಂದ ಪರಿಸ್ಥಿತಿ ಇನ್ನಷ್ಟು ಸುಧಾರಿಸಬಹುದೆಂಬ ನಂಬಿಕೆ ಇದ್ದು, ಸಚಿವ ಸಂಪುಟ ಸಭೆಯಲ್ಲಿ ಮೋಡಬಿತ್ತನೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಕೇಂದ್ರದ ಮಾರ್ಗಸೂಚಿ ಅನ್ವಯ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದ್ದು, 34ಗಳಲ್ಲಿ ಗಂಭೀರ ಪರಿಸ್ಥಿತಿ ಇದೆ. ಕೇಂದ್ರ ಮಾರ್ಗಸೂಚಿ ಅನ್ವಯವಾಗದಿದ್ದರೂ ಈ ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಿ 195 ತಾಲೂಕಗಳು ಬರ ಪೀಡಿತ ಎಂದು ಘೋಷಿಸಲಾಗಿದೆ. ಕಳೆದ ಒಂದು ವಾರದಿಂದ ಮೋಡಗಳು ಉತ್ತಮ ರೀತಿಯಲ್ಲಿ ದಟ್ಟೈಸುತ್ತಿದ್ದು, ಮೋಡ ಬಿತ್ತನೆ ಮಾಡುವ ಮೂಲಕ ಮಳೆ ಸುರಿಸಿ ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆಗಳಿಗೆ ಅನುಕೂಲ ಮಾಡಿಕೊಡುವ ಚಿಂತನೆ ಇದೆ ಎಂದು ಹೇಳಲಾಗಿದೆ.