ಬೆಂಗಳೂರು: ಪತ್ನಿ ತನಗೆ ಮಾಹಿತಿ ನೀಡದೆ ಭಾರತಕ್ಕೆ ಕರೆದುಕೊಂಡು ಬಂದಿರುವ ಮಗುವನ್ನು ಪುನಃ ಜರ್ಮನಿಗೆ ಕಳುಹಿಸಿಕೊಡಲು ನಿರ್ದೇಶನ ನೀಡಬೇಕೆಂದು ಕೋರಿ ಭಾರತೀಯ ಮೂಲದ ಶಂಕರ್ ವಿಶ್ವನಾಥನ್ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಿಭಾಗಿಯ ಪೀಠ ವಜಾಗೊಳಿಸಿದೆ.
ಜರ್ಮನಿ ಪೌರತ್ವ ಹೊಂದಿರುವ ಅಪ್ರಾಪ್ತ ಮಗನನ್ನು ನನ್ನ ಅನುಮತಿ ಇಲ್ಲದೆ ಪತ್ನಿ ಭಾರತಕ್ಕೆ ಕರೆತಂದಿದ್ದು, ಮಗುವನ್ನು ಮತ್ತೆ ಜರ್ಮನಿಗೆ ಕಳುಹಿಸಿಕೊಡಲು ಪತಿ ಕೋರಿದ್ದರು. ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಶಂಕರ್ ವಿಶ್ವನಾಥನ್ ಅರ್ಜಿಯನ್ನು ವಜಾಗೊಳಿಸಿದೆ.
ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ನೀಡಿದ ಮಧ್ಯಂತರ ಆದೇಶ ಜಾರಿಯಲ್ಲಿರುವಾಗ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ. 2017ರ ಜೂನ್ 8ರಂದು ಬೆಂಗಳೂರಿನ 4ನೇ ಕೌಟುಂಬಿಕ ನ್ಯಾಯಾಲಯ, ಪುತ್ರನನ್ನು ಪತ್ನಿ ರಮ್ಯಾ ಅವರ ಸುಪರ್ದಿಗೆ ನೀಡಿ ಆದೇಶಿಸಿದೆ. ಜರ್ಮನಿ ಕೋರ್ಟ್ ನಲ್ಲಿ ಮಗುವಿನ ಸುಪರ್ದಿ ವ್ಯಾಜ್ಯ ಭಾರತದ ನ್ಯಾಯಾಲಯದಲ್ಲಿ ಮುಂದುವರೆಸುವುದಾಗಿ ಪತಿ, ಪತ್ನಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕೋರ್ಟ್ ಹೇಳಿದೆ.
ತಾಯಿ ಮತ್ತು ಅಜ್ಜ-ಅಜ್ಜಿಯೊಂದಿಗೆ ಮಗು ನೆಲೆಸಿದ್ದು, ಪತ್ನಿ ಮಗುವನ್ನು ನೋಡಿಕೊಳ್ಳಲು ಸೂಕ್ತವಾಗಿಲ್ಲ ಎನ್ನುವ ಬಗ್ಗೆ ಪತಿ ಆಕ್ಷೇಪಿಸಿಲ್ಲ. ಈ ಹಂತದಲ್ಲಿ ಪತ್ನಿಗೆ ಜರ್ಮನಿಗೆ ತೆರಳಲು ಸೂಚಿಸಿದರೆ ಮಗುವಿನ ವಾತಾವರಣ ದಿಢೀರ್ ಬದಲಾಗಿ ದಿನನಿತ್ಯದ ಚಟುವಟಿಕೆ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಗುವನ್ನು ಜರ್ಮನಿಗೆ ಕಳುಹಿಸಿಕೊಡಲು ಅರ್ಜಿದಾರರ ಪತ್ನಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲವೆಂದು ಕೋರ್ಟ್ ಹೇಳಿದೆ. ತನ್ನ ಅನುಮತಿ ಮತ್ತು ಒಪ್ಪಿಗೆ ಪಡೆಯದೇ ಪತ್ನಿ ಭಾರತಕ್ಕೆ ಮಗುವನ್ನು ಕರೆದುಕೊಂಡು ಬಂದಿದ್ದಾರೆ. ಪುತ್ರ ಜರ್ಮನಿ ಪ್ರಜೆಯಾಗಿರುವುದರಿಂದ ಆತನ ಬೆಳವಣಿಗೆ ಜರ್ಮನಿ ವ್ಯವಸ್ಥೆಯಲ್ಲಿ ಉತ್ತಮವಾಗಿರುತ್ತದೆ. ಮಗುವನ್ನು ಜರ್ಮನಿಗೆ ಕಳುಹಿಸಿಕೊಡಲು ಪತ್ನಿಗೆ ಆದೇಶಿಸುವಂತೆ ಅರ್ಜಿದಾರರು ಹೇಳಿದ್ದಾರೆ. ಆದರೆ, ಇದನ್ನು ಒಪ್ಪದ ಹೈಕೋರ್ಟ್, ಅಜ್ಜ ಅಜ್ಜಿಯ ಪ್ರೀತಿ, ತಾಯಿಯ ವಾತ್ಸಲ್ಯ ಮಗುವಿನ ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಈ ವಾತಾವರಣ ಜರ್ಮನಿಯಲ್ಲಿ ಕೆಲಸ ಮಾಡಿಕೊಂಡು ಒಬ್ಬಂಟಿಯಾಗಿ ನೆಲೆಸಿರುವ ತಂದೆಯ ಬಳಿ ಸಿಗುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.