ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಲ್ಲೇರಿ ಗ್ರಾಮದಲ್ಲಿ ಮಹಿಳೆಯೊಬ್ಬರು ತನ್ನ ಅಂಬೆಗಾಲಿಡುವ ಮಗಳ ಮೃತದೇಹವನ್ನು ಕೈಯಲ್ಲಿಡುದುಕೊಂಡ ಸಾಗಿಸಿದ್ದಾರೆ.
ರಸ್ತೆ ಸೌಕರ್ಯಗಳು ಹಾಳಾಗಿದ್ದರಿಂದ ಆಂಬ್ಯುಲೆನ್ಸ್ ಕೆಟ್ಟು ಹೋಗಿ ಈ ಘಟನೆ ನಡೆದಿದೆ. 18 ತಿಂಗಳ ಅಂಬೆಗಾಲಿಡುವ ತನುಷ್ಕಾ ತನ್ನ ಪೋಷಕರೊಂದಿಗೆ ತನ್ನ ನಿವಾಸದ ಹೊರಗೆ ಮಲಗಿದ್ದಾಗ ಹಾವು ಕಚ್ಚಿದೆ. ಮಗುವಿಗೆ ಏನೋ ಆಗಿದೆ ಎಂದು ತಿಳಿದ ನಂತರ, ತಂದೆ ವಿಜಿ ಮತ್ತು ತಾಯಿ ಪ್ರಿಯಾ ಮಗುವನ್ನು ಆನೈಕಟ್ಟು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಸರಿಯಾದ ರಸ್ತೆ ಸೌಕರ್ಯ ಇಲ್ಲದ ಕಾರಣ ಆಸ್ಪತ್ರೆಗೆ ತಲುಪಲು ಬಹಳ ಸಮಯ ಹಿಡಿದಿದೆ. ಆಸ್ಪತ್ರೆ ತಲುವುದು ತಡವಾಗಿದ್ದರಿಂದ ವಿಷವು ಮಗುವಿನ ದೇಹದಾದ್ಯಂತ ಹರಡಿ ಸಾವನ್ನಪ್ಪಿದೆ. ಆಸ್ಪತ್ರೆಗೆ ತಲುಪಿದ ನಂತರ ವೈದ್ಯರು ಮಗು ಮೃತಪಟ್ಟಿರುವ ಬಗ್ಗೆ ಘೋಷಿಸಿದ್ದಾರೆ.
ಆನೈಕಟ್ಟೆ ಪೊಲೀಸರು ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಮಗುವಿನ ಶವವನ್ನು ಅಂತ್ಯಕ್ರಿಯೆಗಾಗಿ ಪೋಷಕರಿಗೆ ಹಸ್ತಾಂತರಿಸಲಾಯಿತು, ನಂತರ ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯಲಾಗಿದೆ. ವೆಲ್ಲೂರಿನಲ್ಲಿ ಹದಗೆಟ್ಟ ರಸ್ತೆಗಳಿಂದಾಗಿ, ಪೋಷಕರು ಮತ್ತು ಮೃತ ಮಗುವನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಕೆಟ್ಟುಹೋಗಿದೆ. ನಂತರ ತಾಯಿ ಪ್ರಿಯಾ ಮಣ್ಣು, ಕೆಸರುಮಯವಾದ ರಸ್ತೆಯಲ್ಲಿ ಮಗುವನ್ನು ಹೊತ್ತುಕೊಂಡು ತಮ್ಮ ಗ್ರಾಮಕ್ಕೆ ಹೋಗಿದ್ದಾರೆ.