ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ ಯೋಜನೆಗೆ ಚಾಲನೆ ನೀಡಿದ್ದಾರೆ.
ಕ್ವಿನ್ ಸಿಟಿಯು ಒಂದೇ ಸ್ಥಳದಲ್ಲಿ ಸುಸ್ಥಿರ ಪರಿಸರದ ನಡುವೆ ಜ್ಞಾನ, ಆರೋಗ್ಯ, ನಾವೀನ್ಯತೆ ಹಾಗೂ ಸಂಶೋಧನೆಯನ್ನು ಒಟ್ಟುಗೂಡಿಸುವ ಹೊಸ ಪರಿಕಲ್ಪನೆಯುಳ್ಳ ನಗರವಾಗಿರಲಿದೆ.
ಈ ನಗರ ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳು, ಆಧುನಿಕ ಆರೋಗ್ಯ ಸೇವಾ ಸೌಲಭ್ಯಗಳು, ಅತ್ಯಾಧುನಿಕ ಸಂಶೋಧನಾ ಕೇಂದ್ರಗಳು ಹಾಗೂ ನವೋದ್ಯಮ ಸಂಪ್ರದಾಯಗಳನ್ನು ಒಟ್ಟುಗೂಡಿಸುವ ಮತ್ತು ಸುಸ್ಥಿರ ಮೂಲಸೌಕರ್ಯ ಮತ್ತು ಅತ್ಯುತ್ತಮ ಸಂಪರ್ಕವಿರುವಂತಹ ವಿಶೇಷ ನಗರವಾಗಿರುತ್ತದೆ.
ಶತಮಾನಗಳಿಂದ ಕರ್ನಾಟಕವು ಶಿಕ್ಷಣ ಮತ್ತು ಬೌದ್ಧಿಕ ಪ್ರಗತಿಯ ಬಹುಮುಖ್ಯ ತಾಣವಾಗಿದೆ. ಶಿಕ್ಷಣ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕ ಮೊದಲಿನಿಂದಲೂ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಶಿಕ್ಷಣವನ್ನು ಉನ್ನತ ತಂತ್ರಜ್ಞಾನದ ತಯಾರಿಕೆಗೆ ಅಳವಡಿಸಿಕೊಂಡ ಭಾರತದ ಮೊದಲ ರಾಜ್ಯ ಕರ್ನಾಟಕ ಎಂದು ಕೈಗಾರಿಕೆ ಸಚಿವ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ (ಕ್ವಿನ್ ಸಿಟಿ) ಅಭಿವೃದ್ಧಿಯ ಹಿಂದಿರುವ ಮೂಲ ಸಿದ್ಧಾಂತವೇ ಇದಾಗಿದೆ. ಹೊಸ ಸಂಶೋಧನೆಗಳು, ಅತ್ಯಾಧುನಿಕ ಆರೋಗ್ಯ ಸೇವೆಗಳು, ಉತ್ತಮ ಶಿಕ್ಷಣ-ಕೌಶಲ್ಯಾಭಿವೃದ್ಧಿ, ತಂತ್ರಜ್ಞಾನ ಆಧಾರಿತ ತಯಾರಿಕೆ ಹೀಗೆ ಒಂದು ಸುಸ್ಥಿರ ವ್ಯವಸ್ಥೆಯನ್ನು ನಿರ್ಮಿಸಿ ಕರ್ನಾಟಕವನ್ನು ಜಾಗತಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದು ಹೇಳಿದ್ದಾರೆ.