ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಇದೆ ವೇಳೆ ಪೊಲೀಸರು ಹಾಗೂ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 29 ನಕ್ಸಲರನ್ನು ಹತ್ಯೆಗೈದಿದ್ದಾರೆ.
ಛತ್ತೀಸ್ ಗಢದಲ್ಲಿ ನಕ್ಸಲರ ವಿರುದ್ಧದ ಸಮರದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 29 ನಕ್ಸಲರನ್ನು ಸದೆಬಡಿಯಲಾಗಿದೆ. ಮಾವೋವಾದಿಗಳ ಭದ್ರಕೋಟೆ ಎಂದು ಬಿಂಬಿತವಾಗಿದ್ದ ಬಸ್ತಾರ್ ಪ್ರದೇಶದಲ್ಲಿ ಎನ್ ಕೌಂಟರ್ ನಲ್ಲಿ 29 ನಕ್ಸಲರು ಸಾವನ್ನಪ್ಪಿದ್ದಾರೆ.
ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ಮೂವರು ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಮೃತ ನಕ್ಸಲರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪ್ರಭಾವಿ ನಕ್ಸಲ್ ಕಮಾಂಡರ್ ಶಂಕರ್ ರಾವ್ ನನ್ನು ಹತ್ಯೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ಹಿಡಿದುಕೊಟ್ಟವರಿಗೆ 25 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಈ ಎನ್ ಕೌಂತರ್ ಕಾರ್ಯಾಚರಣೆಯನ್ನು ಛತ್ತಿಸ್ ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ, ನಕ್ಸಲರ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಕರೆದಿದ್ದಾರೆ.