ಛತ್ತೀಸ್‌ಗಢದ ಬೆಮೆತಾರಾ ಜಿಲ್ಲೆಯಲ್ಲಿ ಸರಕು ಸಾಗಣೆ ವಾಹನವು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಂತ್ರಸ್ತರು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಕಥಿಯಾ ಗ್ರಾಮದ ಬಳಿ ಭಾನುವಾರ ತಡರಾತ್ರಿ ಈ ದುರಂತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಮಿನಿ ಲಾರಿಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿದೆ.
ಪಥರಾ ಗ್ರಾಮದವರಾದ ಸಂತ್ರಸ್ತರು ತಿರೈಯಾ ಗ್ರಾಮದಲ್ಲಿ ನಡೆದ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ತೀವ್ರವಾಗಿ ಗಾಯಗೊಂಡವರನ್ನು ರಾಯ್‌ಪುರದ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ.
ಮೃತರನ್ನು ಭೂರಿ ನಿಶಾದ್(50), ನೀರಾ ಸಾಹು(55), ಗೀತಾ ಸಾಹು(60), ಅಗ್ನಿಯಾ ಸಾಹು(60), ಖುಷ್ಬು ಸಾಹು(39), ಮಧು ಸಾಹು(5), ರಿಕೇಶ್ ನಿಶಾದ್(6) ಮತ್ತು ಟ್ವಿಂಕಲ್ ನಿಶಾದ್(6) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆರಂಭದಲ್ಲಿ ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ನಂತರ ತೀವ್ರವಾಗಿ ಗಾಯಗೊಂಡ ನಾಲ್ವರನ್ನು ರಾಯ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ವರ್ಗಾಯಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.