ಕಾಂಕೇರ್: ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 29 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಮೂವರು ಯೋಧರು ಗಾಯಗೊಂಡಿದ್ದಾರೆ.
2024ರ ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿ ಐಕೆ ಎಲೆಸೆಲಾ, ಈ ಪ್ರದೇಶದಲ್ಲಿ ಇನ್ನೂ ಎನ್‌ಕೌಂಟರ್ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕಾಂಕೇರ್‌ನಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.
ಟಾಪ್ ನಕ್ಸಲ್ ಕಮಾಂಡರ್ ಹತ್ಯೆ
ಶಂಕರ್ ರಾವ್ ಎಂಬ ಪ್ರಮುಖ ನಕ್ಸಲ್ ಕಮಾಂಡರ್ ಸೇರಿದಂತೆ ಎನ್‌ಕೌಂಟರ್‌ನಲ್ಲಿ ನಕ್ಸಲೀಯರ ಸಾವನ್ನು ಎಸ್‌ಪಿ ಇಂದ್ರ ಕಲ್ಯಾಣ್ ಎಲಿಸೆಲಾ ಖಚಿತಪಡಿಸಿದ್ದಾರೆ. ಆತನ ತಲೆಯ ಮೇಲೆ 25 ಲಕ್ಷ ರೂಪಾಯಿ ಬಹುಮಾನವಿತ್ತು. ಹೆಚ್ಚುವರಿಯಾಗಿ, ಕಾರ್ಯಾಚರಣೆಯ ಸಮಯದಲ್ಲಿ ನಾಲ್ಕು AK-47 ರೈಫಲ್ ಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಛೋಟೆಬೆಥಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿನಗುಂದ ಮತ್ತು ಕೊರೊನಾರ್ ಗ್ರಾಮಗಳ ನಡುವಿನ ಹಪಟೋಲಾ ಅರಣ್ಯದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು, ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಮತ್ತು ರಾಜ್ಯದ ಜಿಲ್ಲಾ ಮೀಸಲು ಪಡೆ(ಡಿಆರ್‌ಜಿ) ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಕೇರ್‌ನ ಛೋಟೆಬೆಥಿಯಾದಲ್ಲಿ ಎನ್‌ಕೌಂಟರ್ ಸೈಟ್‌ನಿಂದ ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಕಾರ್ಯಾಚರಣೆಯಲ್ಲಿ 3 ಯೋಧರು ಗಾಯಗೊಂಡಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದು ಪ್ರದೇಶದಲ್ಲಿನ ಅತಿದೊಡ್ಡ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಮಾಹಿತಿಯ ನಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಹಿರಿಯ ನಕ್ಸಲರಾದ ಶಂಕರ್, ಲಲಿತಾ, ರಾಜು ಮೃತಪಟ್ಟಿರುವ ಮಾಹಿತಿ ಇದೆ ಎಂದು ಐಜಿ ಬಸ್ತಾರ್ ಪಿ. ಸುಂದರರಾಜ್ ಹೇಳಿದ್ದಾರೆ.