ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಪರೀಕ್ಷೆ ಭಾರಿ ಗೊಂದಲಕ್ಕೆ ಕಾರಣವಾಗಿದೆ. 4 ವಿಷಯಗಳಲ್ಲಿ ಪಠ್ಯದಲ್ಲಿ ಇಲ್ಲದ ಸುಮಾರು 51 ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿದ್ಯಾರ್ಥಿಗಳು, ಪೋಷಕರು, ಉಪನ್ಯಾಸಕರಿಂದ ಆಕ್ರೋಶ ವ್ಯಕ್ತವಾಗಿದೆ.
ಪ್ರಾಧಿಕಾರದ ವಿರುದ್ಧ ತನಿಖೆ ನಡೆಸಿ, ಮರು ಪರೀಕ್ಷೆ ನಡೆಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಶುಕ್ರವಾರ ನಡೆದ ಸಿಇಟಿ ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯಗಳ ಪರೀಕ್ಷೆಯಲ್ಲಿ ಸುಮಾರು 31 ಪಠ್ಯೇತರ ಪ್ರಶ್ನೆ ಕೇಳಲಾಗಿದೆ. ಗುರುವಾರ ನಡೆದ ಜೀವಶಾಸ್ತ್ರ ಮತ್ತು ಗಣಿತ ವಿಷಯಗಳ ಪರೀಕ್ಷೆಯಲ್ಲಿ 20ಕ್ಕೂ ಅಧಿಕ ಪಠ್ಯೇತರ ಪ್ರಶ್ನೆ ಕೇಳಲಾಗಿತ್ತು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲೆಡೆ ಸಿಇಟಿ ಪರೀಕ್ಷೆ ಸುಗಮವಾಗಿ ಮುಕ್ತಾಯಗೊಂಡಿದೆ ಎಂದು ಪ್ರಾಧಿಕಾರ ತಿಳಿಸಿದ್ದು, ಪರೀಕ್ಷೆಯಲ್ಲಿ ನೀಡಲಾದ ಪ್ರಶ್ನೆಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಏ. 27ರೊಳಗೆ keaugcet@gmail.com ಗೆ ಇ-ಮೇಲ್ ಮೂಲಕ ಸಲ್ಲಿಸುವಂತೆ ತಿಳಿಸಲಾಗಿದೆ.